ಚಂದ್ರಶೇಖರ ನುಗ್ಗಲಿ ಅವರಿಗೆ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಪಟ್ಟ- ಅಭಿನಂದನಾ ಸಮಾರಂಭದಲ್ಲಿ ಸನ್ಮಾನದ ಝೇಂಕಾರ | ಬೈಕ್ ರ್ಯಾಲಿ ಹೋಂಕಾರ | ಮುಗಿಲು ಮುಟ್ಟಿದ ಶಿಕ್ಷಕ-ಅಭಿಮಾನಿಗಳ ಸಂಭ್ರಮ
ಉದಯರಶ್ಮಿ ದಿನಪತ್ರಿಕೆ
ನಿಡಗುಂದಿ: ಅವಳಿ ಜಿಲ್ಲೆಯ ಶಿಕ್ಷಕರ ಸಹಕಾರ, ರಾಜ್ಯದ ಶಿಕ್ಷಕರ ಸಮಸ್ಯೆಗಳಿಗೆ ಪ್ರಾಮಾಣಿಕ ಸ್ಪಂದನೆಯ ಕಾರಣ ರಾಜ್ಯದ ೧.೮೦ ಲಕ್ಷ ಸದಸ್ಯರುಳ್ಳ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಚುಕ್ಕಾಣಿ ಹಿಡಿಯಲು ಸಾಧ್ಯವಾಯಿತು ಎಂದು ಸಂಘದ ನೂತನ ರಾಜ್ಯ ಘಟಕದ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ ಹೇಳಿದರು.
ಪಟ್ಟಣದಲ್ಲಿ ಭಾನುವಾರ ನಿಡಗುಂದಿ ತಾಲ್ಲೂಕು ಶಿಕ್ಷಕರು, ವಿವಿಧ ಸಂಘ ಸಂಸ್ಥೆಗಳು ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ೨೦೦ ಕ್ಕೂ ಹೆಚ್ಚು ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಶಿಕ್ಷಕರ ಬಹು ಬೇಡಿಕೆಯ ವೃಂದ ಮತ್ತು ನೇಮಕಾತಿ ನಿಯಮಾವಳಿ ತಿದ್ದುಪಡಿಯ ಸಮಸ್ಯೆಯನ್ನು ಇದೇ ಸೆ.೫ ಶಿಕ್ಷಕರ ದಿನಾಚರಣೆಯೊಳಗೆ ಬಗೆಹರಿಸಲಾಗುವುದು, ೫೮ ಸಾವಿರ ಪದವಿಧರ ಪಿ.ಎಸ್.ಟಿ ಶಿಕ್ಷಕರಿಗೆ ಒಂದು ವೇತನ ಬಡ್ತಿ ನೀಡುವಿಕೆ, ಎಲ್.ಬಿ.ಎ (ಪಠ್ಯ ಆಧಾರಿತ ಚಟುವಟಿಕೆ) ಯಲ್ಲಿನ ಘಟಕ ಪರೀಕ್ಷಾ ಅಂಕ ಕಡಿಮೆ ಮಾಡುವುದು, ಎಲ್ ಬಿಎ ಹೊರತುಪಡಿಸಿ ಇನ್ನೀತರ ಪರೀಕ್ಷೆ ರದ್ದುಗೊಳಿಸುವುದು, ನಲಿಕಲಿ ವ್ಯವಸ್ಥೆ ರದ್ದುಗೊಳಿಸುವುದು, ಸರ್ಕಾರಿ ಶಾಲೆಯ ಪ್ರತಿ ವಿದ್ಯಾರ್ಥಿಗಳಿಗೂ ೬ ನೋಟ್ ಬುಕ್ ವಿತರಣೆಗೆ ಸಂಘ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಆಯಾ ಸ್ಥಳೀಯ ಆಡಳಿತಕ್ಕೆ ಸರ್ಕಾರಿ ಶಾಲೆಯ ಶೌಚಾಲಯ ನಿರ್ವಹಣೆ, ಕೊಠಡಿಗಳ ದುರಸ್ತಿ ಜವಾಬ್ದಾರಿ ನೀಡಲು ಸರ್ಕಾರದ ಮೇಲೆ ಒತ್ತಡ ಹೇರಲಾಗಿದೆ. ವಾರಕ್ಕೆ ೬ ದಿನ ಮೊಟ್ಟೆ ಕೊಡುವ ಬದಲು ೩ ದಿನ ಮೊಟ್ಟೆ ಕೊಟ್ಟು, ಉಳಿದ ಹಣದಲ್ಲಿ ಶಾಲೆಗಳಿಗೆ ಡಿ ಗ್ರುಪ್ ನೌಕರರನ್ನು ಒದಗಿಸಲು ಮನವಿ ಮಾಡಲಾಗಿದೆ ಎಂದರು.
ಇನ್ಫೋಸಿಸ್ ವತಿಯಿಂದ ನಿಡಗುಂದಿ ತಾಲ್ಲೂಕಿನ ಪ್ರತಿ ಶಾಲೆಗೂ ಕಂಪ್ಯೂಟರ್ ನೀಡಲಾಗಿದೆ.ಮುಂದಿನ ಹಂತದಲ್ಲಿ ಪ್ರತಿ ಶಾಲೆಗೂ ಸ್ಮಾರ್ಟ್ ಕ್ಲಾಸ್ ಒದಗಿಸಲು ಕ್ರಮ ಕೈಗೊಳ್ಳುತ್ತೇನೆ ಎಂದರು.
ಶಿಕ್ಷಕ ಸಂಘಟನೆಯ ವಿವಿಧ ಜಿಲ್ಲೆಯ ಮುಖಂಡರಾದ ಬಸವರಾಜ ಬಾಗೇನವರ,ಅರ್ಜುನ ಲಮಾಣಿ,ಎಸ್. ಎಂ.ಲೋಕಣ್ಣವರ, ಜಿ.ಎಂ. ಹಿರೇಮಠ, ಮಾಗಡಿ ಮೂರ್ತಿ ಮಾತನಾಡಿ, ಚಂದ್ರಶೇಖರ ನುಗ್ಗಲಿ ಶಿಕ್ಷಕರ ಪರ ಕೈಗೊಂಡ ವಿವಿಧ ಕಾರ್ಯಗಳನ್ನು ಶ್ಲಾಘಿಸಿದರು. ಅವರ ಸಂಘಟನಾ ಶೈಲಿಯನ್ನು ಮುಕ್ತಕಂಠದಿಂದ ಬಣ್ಣಿಸಿದರು.
ಪ್ರಾಸ್ತವಿಕವಾಗಿ ಮಾತನಾಡಿದ ಶಿಕ್ಷಕ ಬಸವರಾಜ ಹಂಚಲಿ,ಚಂದ್ರಶೇಖರ ನುಗ್ಗಲಿ ಅವರ ಸಂಪೂರ್ಣ ಬದುಕು ಶಿಕ್ಷಕರ ಸಂಘಕ್ಕೆ ಮೀಸಲು. ರಚನಾತ್ಮಕ ಚಟುವಟಿಕೆ ಮೂಲಕ ಜೀವ ಕಳೆ ತಂದಿದ್ದಾರೆ. ಜೀವಭಾವ ಸಮಪಿ೯ಸಿದ್ದಾರೆ. ನವತನ ಕಟ್ಟಿಕೊಟ್ಟಿದ್ದಾರೆ ಎಂದರು. ಹಳ್ಳಿಯ ಹುಡುಗ ಬೆಂಗಳೂರಿನ ಪ್ರತಿಷ್ಟಿತ ಸಂಘದ ಅಧ್ಯಕ್ಷ ಸ್ಥಾನ ಆದ ಬಗೆಯನ್ನು ಎಳೆಎಳೆಯಾಗಿ ವಿವರಿಸಿದರು.
ಶಿಕ್ಷಕರ ಸಂಘದ ನಿಡಗುಂದಿ ತಾಲ್ಲೂಕು ಘಟಕದ ವತಿಯಿಂದ ಚಂದ್ರಶೇಖರ ನುಗ್ಗಲಿ ಅವರಿಗೆ ಬೆಳ್ಳಿಯ ಗಧೆ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಓಸಿಸಿ ಬ್ಯಾಂಕ್ ಅಧ್ಯಕ್ಷ ಆನಂದಗೌಡ ಗೌಡರ, ಶಹಂಶಾದ್ ಬೇಗಂ ಕನಕಗಿರಿ, ಶಿವಾನಂದ ಮುಚ್ಚಂಡಿ, ಉಮೇಶ ಕೌಲಗಿ, ಎಂ.ಎಂ.ಮುಲ್ಲಾ, ಎಂ.ಎಸ್.ಮುಕಾರ್ತಿಹಾಳ, ಸಲೀಂ ದಡೆದ, ಬಸವರಾಜ ಹಂಚಲಿ, ಮಹೇಶ ಗಾಳಪ್ಪಗೋಳ, ಕರಿಯಪ್ಪ ಸಿಂದಗಿ, ಹನುಮಂತ ಮಾಳಗೊಂಡ ಮತ್ತಿತರರು ಇದ್ದರು.
ವಿಜಯಪುರ, ಬಾಗಲಕೋಟೆ, ಚಿಕ್ಕೋಡಿ, ಯಾದಗಿರಿ, ಬೆಳಗಾವಿ ,ಕೊಪ್ಪಳ ಜಿಲ್ಲೆಯಿಂದ ಶಿಕ್ಷಕರು ಆಗಮಿಸಿದ್ದರು.
೨೦೦ ಕ್ಕೂ ಹೆಚ್ಚು ಸಂಘ, ಸಂಸ್ಥೆಗಳು ಸನ್ಮಾನ ಮಾಡಿದರು.
ಬೈಕ್ ರ್ಯಾಲಿ
ನಿಡಗುಂದಿಗೂ ಆಗಮನಕ್ಕೂ ಮುನ್ನ ಯಲಗೂರು ಆಂಜನೇಯ ದೇವಸ್ಥಾನದಲ್ಲಿ ದರ್ಶನ ಪಡೆದ ನಂತರ ೩೦೦ ಕ್ಕೂ ಹೆಚ್ಚು ಬೈಕ್ ಗಳೊಂದಿಗೆ ನಿಡಗುಂದಿ ವರೆಗೆ ವೈಭವೋಪೇತ ಅಭಿಮಾನದ ಅಭಿನಂದನಾ ಮೆರವಣಿಗೆ ಜರುಗಿತು. ನಿಡಗುಂದಿಯ ಬಸ್ ನಿಲ್ದಾಣದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ತೆರೆದ ವಾಹನದಲ್ಲಿ ವಾದ್ಯಗಳ ನಿನಾದ ಮಧ್ಯೆ ಮೆರವಣಿಗೆ ಜರುಗಿತು.

