ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪಟ್ಟಣದ ಸಂಗಮೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ 2025-26ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಶಾಲಾ ಸಂಸತ್ ಗೆ ಚುನಾವಣೆ ಜರುಗಿತು.
ಶಿಕ್ಷಕರು ಮಕ್ಕಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಿತ್ತಲು ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿ ಚುನಾವಣೆಯನ್ನು ನಡೆಸಿದರು. ಚುನಾವಣೆ ದಿನಾಂಕ ಘೋಷಣೆ, ನಾಮಪತ್ರ ಸಲ್ಲಿಕೆ, ಹಿಂದಕ್ಕೆ ತೆಗೆದುಕೊಳ್ಳುವುದು, ಚಿಹ್ನೆ ವಿತರಣೆ, ಪ್ರಚಾರ ಕಾರ್ಯ ಭರದಿಂದ ಜರುಗಿತು. ನಂತರ ಶಿಕ್ಷಕರು ಮೊಬೈಲ್ ನಲ್ಲಿ ಇಲೆಕ್ಟ್ರಾನಿಕ ವೋಟಿಂಗ್ ಮಷಿನ್ ಅಪ್ ದೌನ್ಲೋಡ್ ಮಾಡಿ ಅದರಲ್ಲಿ ಮಕ್ಕಳಿ ನೀಡಿದ ಚಿಹ್ನೆಯನ್ನು ಅಳವಡಿಸಿ ತರಗತಿವಾರು ಮತದಾನ ನಡೆಸಿದರು.
ಈ ವೇಳೆ 5,6 ಹಾಗೂ 7ನೇ ತರಗತಿಯ ನೂರಾರು ಮಕ್ಕಳು ಆಧಾರ ಕಾರ್ಡ್ಗಳನ್ನು ತೋರಿಸಿ ಸಂಭ್ರಮದಿಂದ ತಮ್ಮ ತಮ್ಮ ಅಭ್ಯರ್ಥಿಗಳಿಗೆ ಮತ ಹಾಕಿದರು.
ಈ ವೇಳೆ ಚುನಾವಣೆಯನ್ನು ವ್ಯವಸ್ಥಿತವಾಗಿ ನಡೆಸಲು ಚುನಾವಣೆ ಸಿಬ್ಬಂದಿಗಳಾಗಿ ಗಂಡು ಮಕ್ಕಳು ಪೊಲೀಸ್, ಸೈನಿಕನ ವೇಷ ಧರಿಸಿದರೆ, ಹೆಣ್ಣು ಮಕ್ಕಳು ನರ್ಸ್, ವೈದ್ಯ ಹಾಗೂ ಆಶಾ ಕಾರ್ಯಕರ್ತೆಯರ ವೇಷ ಧರಿಸಿ ಕರ್ತವ್ಯ ನಿರ್ವಹಿಸಿದರು. ಗಂಡು ಮಕ್ಕಳು ಹಳ್ಳಿ ಸೊಗಡಿನ ದೋತಿ ಧರಿಸಿ,ತಲೆಗೆ ರುಮಾಲು ಸುತ್ತಿ, ಪೈಜಾಮ್ ಧರಿಸಿ ವೋಟ್ ಮಾಡಿದರೆ, ಹೆಣ್ಣು ಮಕ್ಕಳು ಬಣ್ಣ ಬಣ್ಣದ ಸೀರೆ ಧರಿಸಿ ಸಂತಸ, ಸಂಭ್ರಮದಿಂದ ವೋಟ್ ಮಾಡಿದರು.
ಮುಖ್ಯ ಚುನಾವಣೆ ಅಧಿಕಾರಿಗಳಾಗಿ ಮುಖ್ಯ ಶಿಕ್ಷಕ ವೈ.ಜಿ. ಶಿರೋಳ, ಗಿರೀಶ ಕುಲಕರ್ಣಿ, ಸಹಾಯಕ ಚುನಾವಣೆ ಅಧಿಕಾರಿಗಳಾಗಿ ಶಿಕ್ಷಕರಾದ ಮಲ್ಲಿಕಾರ್ಜುನ ಕುಬಕಡ್ಡಿ, ಬಸವರಾಜ ತುಪ್ಪದ, ಮಂಜುನಾಥ ಮುಳವಾಡ, ಬಲವಂತ ಹಿಕ್ಕನಗುತ್ತಿ, ಶ್ರೀದೇವಿ ಬಿರಾದಾರ, ಶೈಲಾ ಬಿರಾದಾರ, ಶೃತಿ ಬೀಳಗಿ, ಜ್ಯೋತಿ ದೊಡಮನಿ ಸೇರಿದಂತೆ ಅನೇಕ ಜನ ಶಿಕ್ಷಕ, ಶಿಕ್ಷಕಿಯರು ಕಾರ್ಯ ನಿರ್ವಹಿಸಿದರು.
ಚುನಾವಣೆ ಫಲಿತಾಂಶ
ಶಾಲಾ ಪ್ರಧಾನ ಮಂತ್ರಿಯಾಗಿ ಅಪೂರ್ವ ಬಿರಾದಾರ, ಉಪ ಪ್ರಧಾನ ಮಂತ್ರಿಯಾಗಿ ಶ್ರೇಯಸ್ ಕಾರಜೋಳ, ಶಿಕ್ಷಣ ಮಂತ್ರಿಯಾಗಿ ವಿಕಾಸ ಹೂಗಾರ, ಆರೋಗ್ಯ ಮಂತ್ರಿಯಾಗಿ ಅಖಿಲ ಬಿರಾದಾರ, ಪರಿಸರ ಮಂತ್ರಿಯಾಗಿ ಸ್ಫೂರ್ತಿ ಕೋರಿ, ಕ್ರೀಡಾ ಮಂತ್ರಿಯಾಗಿ ಪ್ರೀತಿ ಮೇಲಿನಮನಿ, ಸಾಂಸ್ಕೃತಿಕ ಮಂತ್ರಿಯಾಗಿ ಸಿಂಚನಾ ಮೇಲಗಿರಿ, ಸ್ವಚ್ಛತೆ ಮಂತ್ರಿಯಾಗಿ ವಂದನಾ ಹೂಗಾರ, ವಾಚನಾಲಯ ಮಂತ್ರಿಯಾಗಿ ಭರತ್ ಬೆಳ್ಳುಬ್ಬಿ, ಪ್ರವಾಸ ಮಂತ್ರಿಯಾಗಿ ಸುಶೀಲಕುಮಾರ ಚೌಡಪ್ಪನವರ, ನೀರಾವರಿ ಮಂತ್ರಿಯಾಗಿ ಭರತ ಗೋಕಾವಿ ಆಯ್ಕೆಯಾಗಿದ್ದಾರೆ ಎಂದು ಶಾಲೆಯ ಮುಖ್ಯ ಶಿಕ್ಷಕ ವೈ.ಜಿ. ಶಿರೋಳ ತಿಳಿಸಿದರು.

