ಝಳಕಿಗೆ ಧಿಡೀರನೆ ಭೇಟಿ ನೀಡಿದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಡಾ.ತಿಪ್ಪೇಸ್ವಾಮಿ ಕೆ.ಟಿ ಸಲಹೆ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಝಳಕಿ ಗ್ರಾಮದ ಸರ್ಕಾರಿ ಪ್ರೌಢಶಾಲೆ, ಡಿಗ್ರಿ ಕಾಲೇಜಿಗೆ ಗ್ರಾಮ ಪಂಚಾಯತ್, ಪೊಲೀಸ್ ಠಾಣೆಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ಕೆ. ಟಿ. ಧಿಡೀರನೇ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗ್ರಾ.ಪಂಚಾಯತಿ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಡಾ.ತಿಪ್ಪೇಸ್ವಾಮಿ ಕೆ.ಟಿ. ಅವರು, ಪ್ರತಿ ತಿಂಗಳಿಗೆ ಪಂಚಾಯತನಲ್ಲಿ ಮಕ್ಕಳ ಕುರಿತು ನೀತಿ ಕಾನೂನು, ಕ್ರಿಯಾ ಯೋಜನೆ, ಶಿಕ್ಷಣ ಮಾಹಿತಿ ಹಂಚಿಕೆ, ಸಾಹಿತ್ಯ ತರಬೇತಿ ಕಾರ್ಯಾಗಾರ, ಮಕ್ಕಳನ್ನು ಕುರಿತು ಪ್ರಚಾರ ಮತ್ತು ಆಂದೋಲನ, ವಿಕಾಸ ಸಂಬಂಧಿತ ಸಂಶೋಧನೆ, ಹಕ್ಕುಗಳ ಕುರಿತು ಸಾಹಿತ್ಯ ರಚನೆ, ಪ್ರತಿಪಾದನೆ ಮತ್ತು ವಕೀಲಿ ಇಂತಹ ಚಟುವಟಿಕೆಗಳನ್ನು ಮಾಡಿ ಮಕ್ಕಳಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರಲ್ಲದೆ, ಆ ಸಂದರ್ಭದಲ್ಲಿ ಸಭೆಗೆ ಸಿ. ಆರ್. ಸಿ. ಮತ್ತು ಗ್ರಾಮಕ್ಕೆ ಸಂಭಂದಿಸಿದ ಪೊಲೀಸ ಸಿಬ್ಬಂದಿ ಎಲ್ಲರು ಹಾಜರಾಗಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಸಣ್ಣಪ್ಪ ತಳವಾರ, ಪವನ ಪಾಟೀಲ, ರವಿಕುಮಾರ್ ಹೂಗಾರ ತಮ್ಮ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಅಧಿಕಾರಿಗಳಾದ ಶೇಖರಗೌಡ ರಾಮತನೂರ, ಶಶಿ ಕಾಸುಂಬೆ, ಶಬ್ಬೀರ ಮುಲ್ಲಾ, ಶ್ರೀಶೈಲ ಬಿರಾದಾರ ಹಾಗೂ ಎಲ್ಲ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

