ಪ್ರೇರಣಾ ಪಬ್ಲಿಕ್ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಆವರಣದಲ್ಲಿ ಹಮ್ಮಿಕೊಂಡ ಪಠ್ಯಪೂರಕ ಚಟುವಟಿಕೆಗಳ, ಶಾಲಾ ಸಂಘಗಳ ಉದ್ಘಾಟನೆ ಹಾಗೂ ಶಾಲಾ ಸಂಸತ್ತು ಪದಾಧಿಕಾರಿಗಳ ಪ್ರತಿಜ್ಞಾವಿಧಿ ಸಮಾರಂಭ | ಶಿಕ್ಷಣ ಸಂಯೋಜಕ ಬಸನಗೌಡ ಪಾಟೀಲ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಈ ಶಾಲಾ ಸಂಸತ್ತಿನ ಚಟುವಟಿಕೆಗಳನ್ನು ಗಮನಿಸಿದಾಗ ನಿಜಕ್ಕೂ ನಾನು ಸಂಸತ್ತಿನಲ್ಲಿಯೇ ಇದ್ದೇನೆ ಎಂಬ ಭಾವ ಮೂಡಿತು. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎನ್ನುವ ದಿಸೆಯಲ್ಲಿ ಈ ಸಂಸ್ಥೆ ಮಕ್ಕಳಲ್ಲಿ ಸಂಸತ್ತಿನ ಜ್ಞಾನ ಮೂಡಿಸುತ್ತಿರುವುದು ಸಂತಸ ಎಂದು ಶಿಕ್ಷಣ ಸಂಯೋಜಕ ಬಸನಗೌಡ ಪಾಟೀಲ ಹೇಳಿದರು.
ಸಿಂದಗಿ ಪಟ್ಟಣದ ಹೊರವಲಯದ ರಾಂಪುರ ರಸ್ತೆಯಲ್ಲಿರುವ ಶ್ರೀ ಸಮರ್ಥ ವಿದ್ಯಾವಿಕಾಸ ವಿವಿದೊದ್ದೇಶಗಳ ಸಂಸ್ಥೆಯ ಪ್ರೇರಣಾ ಪಬ್ಲಿಕ್ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಂಡ ೨೦೨೫-೨೬ನೆಯ ಸಾಲಿನ ಪಠ್ಯಪೂರಕ ಚಟುವಟಿಕೆಗಳ, ಶಾಲಾ ಸಂಘಗಳ ಉದ್ಘಾಟನೆ ಹಾಗೂ ಶಾಲಾ ಸಂಸತ್ತು ಪದಾಧಿಕಾರಿಗಳ ಪ್ರತಿಜ್ಞಾವಿಧಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾಭ್ಯಾಸದ ಕಡೆಗೆ ಮಕ್ಕಳು ಹೆಚ್ಚಿನ ಗಮನ ಹರಿಸಬೇಕು. ಪಾಠದ ಜೊತೆಗೆ ಪಠೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ನಿಮ್ಮ ಪ್ರತಿಭೆಗಳನ್ನು ಹೊರಹಾಕಬೇಕು ಎಂದು ಮಕ್ಕಳಿಗೆ ಸಲಹೇ ನೀಡಿದರು.
ಈ ವೇಳೆ ಕಾರ್ಯಕ್ರಮದ ಅತಿಥಿ ಸ್ಥಾನ ವಹಿಸಿದ ಶರದ ನಾಡಗೌಡ ಮಾತನಾಡಿ, ಇಲ್ಲಿನ ಮಕ್ಕಳ ಶಿಸ್ತು ಸಂಯಮ ನನಗೆ ಸಂತಸ ತಂದಿದೆ. ಮಕ್ಕಳು ಸಾಹಿತ್ಯ ಮತ್ತು ಸಂಗೀತದ ಕಡೆಗೆ ಗಮನ ಹರಿಸಬೇಕು. ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಉಪಕಾರದ ಮನೋಭಾವ ಬೆಳೆಸಿಕೊಳ್ಳಬೇಕು. ಪ್ರೇರಣಾ ಶಾಲೆಯ ಮಕ್ಕಳು ಅನಘ್ರö್ಯ ರತ್ನಗಳಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಕೊಡಮಾಡುವ ಜಿಲ್ಲಾ ಪ್ರಶಸ್ತಿಗೆ ಭಾಜನರಾದ ವರದಿಗಾರರಾದ ಸಿಂದಗಿಯ ಮಲ್ಲಿಕಾರ್ಜುನ ಅಲ್ಲಾಪುರ ಹಾಗೂ ದೇವರ ಹಿಪ್ಪರಗಿಯ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಶಾಲಾ ಪದಾಧಿಕಾರಿಗಳ ಪ್ರತಿಜ್ಞಾವಿಧಿಯನ್ನು ಶಾಲೆಯ ಮುಖ್ಯಗುರುಮಾತೆ ಎಸ್.ಆಯ್.ಅಸ್ಕಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಆರ್.ಡಿ.ಕುಲಕರ್ಣಿ, ನಿರ್ದೇಶಕ ಪಿ.ಡಿ.ಕುಲಕರ್ಣಿ, ಪಾಲಕ ಪ್ರತಿನಿಧಿ ಶಿವಾನಂದ ಮಠಪತಿ, ಮಲ್ಲಮ್ಮ ಕಂಟಿಗೊಂಡ, ಮುಖ್ಯಗುರುಮಾತೆ ಎಸ್.ಆಯ್.ಅಸ್ಕಿ, ಶಾಲಾ ಪ್ರಧಾನ ಕಾರ್ಯದರ್ಶಿ ಸಂಗಮೇಶ ಮಠಪತಿ, ಬಸವರಾಜ ತಳವಾರ, ಎಸ್.ಎಸ್.ಪಾಟೀಲ, ಸತೀಶ ಕುಲಕರ್ಣಿ, ಶ್ರೀಹರಿ ಕುಲಕರ್ಣಿ ಸೇರಿದಂತೆ ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

