ಅ.೧ ರಂದು ಶಾಲೆಗೆ ಬೀಗ ಹಾಕಿ ಪ್ರತಿಭಟಿಸಲು ಬಳ್ಳೊಳ್ಳಿ ಗ್ರಾಮಸ್ಥರ ನಿರ್ಧಾರ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಇತ್ತಿತ್ತಲಾಗಿ ಸರಕಾರಿ ಶಾಲೆಗಳ ಜಮೀನನ್ನೆ ಒತ್ತುವರಿ ಮಾಡುವದು ಸರ್ವೆಸಾಮಾನ್ಯವಾಗಿದೆ ಇದಕ್ಕೆಲ್ಲ ಮುಖ್ಯ ಕಾರಣ ಗ್ರಾ.ಪಂ. ಅಥವಾ ಪ.ಪಂ. ಅಧಿಕಾರಿಗಳೆ ನೇರ ಹೋಣೆ ಏಕೆಂದರೆ ಕಾನೂನು ಬಾಹೀರವಾಗಿ ಹಣದ ಆಮಿಷಕ್ಕೆ ಒಳಗಾಗಿ ನಕಲಿ ಜಾಗದ ಉತಾರೆ ತಯಾರಿಸಿ ಕೊಡುತ್ತಿರುವದು, ಮುಂದಿನ ದಿನಮಾನಗಳಲ್ಲಿ ತುಂಬಾ ಅಪಾಯಕಾರಿಯಾಗಿದೆ. ಇದಕ್ಕೆ ಗ್ರಾ.ಪಂ.ಸದಸ್ಯರ ಒಲವು ಇಲ್ಲದೆ ಇಂಥಹ ಒತ್ತುವರಿ ಕೆಲಸಕ್ಕೆ ಯಾವ ಗ್ರಾ.ಪಂ.ಅಧಿಕಾರಿ ಒಪ್ಪುವದಿಲ್ಲ ಇಂಥಹ ಪ್ರಕರಣಗಳು ಹಳ್ಳಿಗಳಲ್ಲಿ ಅಲ್ಲದೆ ಪಟ್ಟಣಗಳಲ್ಲಿಯೂ ಪ್ರಕರಣಗಳು ನಡೆದಿದ್ದರು ಸರಕಾರದ ಅಧಿಕಾರಿಗಳ ಗಮನಕ್ಕೆ ತಂದರು ಏನು ಕ್ರಮ ಕೈಗೋಳ್ಳದಿರುವದು ಹಲವು ಅನುಮಾನಗಳಿಗೆ ಕಾರಣವಾಗುತ್ತಿವೆ.
ಇದಕ್ಕೆ ಪುಷ್ಟಿ ಎಂಬಂತೆ ಬಳ್ಳೊಳ್ಳಿ ಗ್ರಾಮದ ಸರಕಾರಿ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಒತ್ತುವರಿ ಮಾಡಿದ್ದನ್ನು ತೆರವು ಮಾಡಬೇಕು ಎಂದು ಆಗ್ರಹಿಸಿ ಅ.೦೧ ರಿಂದ ಶಾಲೆಗೆ ಬೀಗ ಜಡಿಯುವುದಾಗಿ ಬಳ್ಳೊಳ್ಳಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಎಚ್ಚರಿಸಿದ್ದಾರೆ.
ಈ ಕುರಿತು ವಿಜಯಪುರ ಜಿಲ್ಲಾಧಿಕಾರಿ ಸೇರಿದಂತೆ ವಿವಿಧ ಅಧಿಕಾರಿಗಳಿಗೆ ಪತ್ರ ಬರೆದಿರುವ ಗ್ರಾಮಸ್ಥರು,೧ ಎಕರೆ ೩೦ ಗುಂಟೆ ಆಸ್ತಿ ಸರಕಾರಿ ಶಾಲೆ ಹೆಸರಿನಲ್ಲಿದ್ದು, ಅದರಲ್ಲಿ ೧ ಎಕರೆ ೧೬ ಗುಂಟೆ ಆವರಣದಲ್ಲಿ ಈಗಾಗಲೇ ಕೆಲವರು ಮನೆ, ಕಟ್ಟಡಗಳು, ಮಸೀದಿ, ಮಂದಿರಗಳು ಸೇರಿದಂತೆ ಬುದ್ಧ, ಬಸವ, ಅಂಬೇಡ್ಕರ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ. ಈಗ ಶಾಲೆಗೆ ಕೇವಲ ೧೪ ಗುಂಟೆ ಜಮೀನು ಮಾತ್ರ ಉಳಿದಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಗ್ರಾಮಸ್ಥರು ಅನೇಕ ಬಾರಿ ಸಂಬಂಧಿಸಿದ ಎಲ್ಲ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಬೇಸತ್ತು ಅನಿವಾರ್ಯವಾಗಿ ಶಾಲೆಗೆ ಬೀಗ ಜಡಿದು ನ್ಯಾಯಸಿಗುವವರೆಗೂ ಪ್ರತಿಭಟನೆ ಸತ್ಯಾಗ್ರಹ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಮತ್ತು ಮುಂದಿನ ಆಗುಹೋಗುಗಳಿಗೆ ಜಿಲ್ಲೆಯ ಮತ್ತು ತಾಲೂಕು ಅಧಿಕಾರಿಗಳೆ ನೇರಹೋಣೆ ಎಂದು ಗ್ರಾಮದ ಮುಖಂಡರಾದ ಶಿವಲಿಂಗಪ್ಪ ತುಪ್ಪದ, ಉಸ್ಮಾನ ಪಠಾಣ, ಈರಣ್ಣ ವಾಲಿ, ಕುಮಾರ ಬಡಿಗೇರ, ವಿಲಾಸಗೌಡ ಪಾಟೀಲ, ರಜಾಕ್ ಮನಿಯಾರ, ಬಸು ಸಗಾಯಿ, ಗಿರಿಮಲ್ಲ ಹಿರೆಕುರುಬರ ಸೇರಿದಂತೆ ಮತ್ತಿತರು ಎಚ್ಚರಿಕೆ ಕೊಟ್ಟಿದ್ದಾರೆ.
