ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಸ್ವಪ್ನಾ ವಾಕ್ ಹಾಗೂ ಶ್ರವಣ ದೋಷವುಳ್ಳ ಮಕ್ಕಳ ಶಾಲೆಯಲ್ಲಿ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರ ಜನ್ಮದಿನವನ್ನು ಅವರ ಅಭಿಮಾನಿಗಳು ಅರ್ಥಪೂರ್ಣವಾಗಿ ಆಚರಿಸಿದರು. ಶಾಲೆಯಲ್ಲಿರುವ ಮಕ್ಕಳಿಗೆ ಹಣ್ಣು ಹಂಪಲು, ಸಿಹಿ ವಿತರಿಸಿದರು.
ಈ ವೇಳೆ ಮಾತನಾಡಿದ ಮಾಜಿ ಉಪಮೇಯರ್ ಗೋಪಾಲ ಘಟಕಾಂಬಳೆ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕರಾಗಿರುವ ಛಲವಾದಿ ನಾರಾಯಣಸ್ವಾಮಿ ಅವರು ಒಬ್ಬ ಶ್ರೇಷ್ಠ ಜನನಾಯಕ, ಶೋಷಿತ ಸಮುದಾಯಗಳ ಧ್ವನಿಯಾಗಿರುವ ಛಲವಾದಿ ನಾರಾಯಣಸ್ವಾಮಿ ವಿಧಾನ ಪರಿಷತ್‌ನಲ್ಲಿ ಸದಾ ಜನರ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವುದುಂಟು, ಹೀಗಾಗಿ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಸಮಾಜಸೇವೆಯೊಂದಿಗೆ ಆಚರಿಸಲಾಗುತ್ತಿದೆ, ದೇವರು ಅವರಿಗೆ ಇನ್ನೂ ಹುದ್ದೆಗಳನ್ನು ನೀಡಲಿ ಎಂದು ಹಾರೈಸಿದರು.
ವಿಡಿಎ ಮಾಜಿ ಅಧ್ಯಕ್ಷ ಭೀಮಾಶಂಕರ ಹದನೂರ, ಪ್ರಮುಖರಾದ ಈರಣ್ಣ ಪಟ್ಟಣಶೆಟ್ಟಿ, ವಿನಾಯಕ ದಹಿಂಡೆ, ಸಿದ್ಧು ಮಲ್ಲಿಕಾರ್ಜುನಮಠ, ರಾಜೇಶ ತಾವಸೆ, ರಮೇಶ ದೇವಕರ, ಕಾಂತು ಶಿಂಧೆ ಮೊದಲಾದವರು ಉಪಸ್ಥಿತರಿದ್ದರು.

