ಕಲಕೇರಿಯ ಆದರ್ಶ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ವಿಶೇಷ ಉಪನ್ಯಾಸ ನೀಡಿದ ಪ್ರೊ.ಜಗದೀಶ ಸಾತಿಹಾಳ
ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ಶಿಕ್ಷಣ ಕೇವಲ ಅಂಕಗಳನ್ನು ಪಡೆಯಲಿಕ್ಕಲ್ಲ ಮಕ್ಕಳಲ್ಲಿ ಬದಕುವ ಶೈಲಿ, ಸಂಸ್ಕಾರ ಕಲಿಸಿ ಕನಸುಗಳನ್ನು ಬಿತ್ತುವುದಾಗಿದ್ದು, ೧೬ ವರ್ಷದೊಳಗಿನ ಮಕ್ಕಳಿಗೆ ಫೋನ್ ಉಪಯೋಗ ಸುರಕ್ಷಿತವಲ್ಲ ಎಂದು ವಿಜಯಪುರದ ಶ್ರೀ ಸಿದ್ದೇಶ್ವರ ಸಂಸ್ಥೆಯ ಸಂಗನಬಸವ ಪಿಯು ಮತ್ತು ಎಸ್.ಸಿ ಉಪ್ಪಿನ ಪದವಿ ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕರಾದ ಪ್ರೊ. ಜಗದೀಶ ಸಾತಿಹಾಳ ಹೇಳಿದರು.
ಕಲಕೇರಿಯ ಆದರ್ಶ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡ ಮಕ್ಕಳ ಪರಿಪೂರ್ಣ ಭವಿಷ್ಯಕ್ಕಾಗಿ ಪಾಲಕರ ಕರ್ತವ್ಯ ಮತ್ತು ಫೋನ್ ಉಪಯೋಗದಿಂದ ಆಗುವ ಅನಾನುಕೂಲತೆಗಳು ಕುರಿತ ವಿಶೇಷ ಉಪನ್ಯಾಸ ಮತ್ತು ಪಾಲಕರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಪಾಲಕರು ದುಡ್ಡ ಕೊಟ್ಟು ಸ್ಕೂಲ್‌ಗೆ ಸೇರಿಸಿದ್ರೆ ಜವಾಬ್ದಾರಿ ಮುಗಿಯಲಿಲ್ಲ, ತಾವೆಸ್ಟೇ ಕೆಲಸದಲ್ಲಿ ಬ್ಯುಸಿ ಇದ್ದರೂ ಮಕ್ಕಳಿಗೆ ಸಮಯ ಕೊಟ್ಟು ಬೆಂಬಲಿಸಿ, ಅವರನ್ನು ಬೇರೆ ಮಕ್ಕಳ ಜೊತೆ ಹೋಲಿಸ್ಬೇಡಿ, ಪ್ರತಿ ಮಗುವಿನ ಸಾಮರ್ಥ್ಯ ವಿಭಿನ್ನವಾಗಿರುತ್ತೆ. ಅಂಕಳಿಂದ ಮಕ್ಕಳನ್ನು ಅಳೆಯಬೇಡಿ ಅವರಲ್ಲಿರುವ ವಿಶೇಷವಾದ ಕೌಶಲ್ಯಕ್ಕೆ ಪ್ರೊತ್ಸಾಹ ಕೊಡಿ ಅದೆಷ್ಟೋ ಸಾಧಕರು ಪರೀಕ್ಷೆಯಲ್ಲಿ ಫೇಲ್ ಆದ್ರೂ ಜೀವನದಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳಾದ ಉದಾಹರಣೆಗಳಿವೆ.
ಮನೆಯೇ ಮೊದಲ ಪಾಠ ಶಾಲೆ, ಜನನಿ ತಾನೇ ಮೊದಲು ಗುರು. ಆದ್ದರಿಂದ ಮನೆಯ ಸಂಸ್ಕಾರ, ಆಚರಣೆಗಳು ಮಗುವಿನ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತವೆ. ಪ್ರಸ್ತುತ ಫೋನ್‌ಲ್ಲಿ ಬರುವ ಅಸ್ಲೀಲ ಜಾನಪದ ಹಾಡುಗಳು, ಅಸ್ಲೀಲ ಚಿತ್ರಗಳಿಂದ ಮಕ್ಕಳು ಪರಸ್ಪರ ಆಕರ್ಷಣೆಗೆ ಒಳಗಾಗಿ ಇಡೀ ತಮ್ಮ ಬದುಕನ್ನು ಹಾಳುಮಾಡಿಕೊಳ್ಳುತ್ತಿದ್ದು, ಪ್ರತಿಯೊಬ್ಬ ಪಾಲಕರು ತಮ್ಮ ಮಗುವಿನ ಬಗ್ಗೆ ವಿಶೇಷವಾದ ಕಾಳಜಿ ವಹಿಸುವ ಅನಿವಾರ್ಯತೆ ಇದೆ ಎಂದರು.
ಮಕ್ಕಳು ತಂದೆ, ತಾಯಿ, ಶಿಕ್ಷಕರು ಮತ್ತು ಪುಸ್ತಕಗಳನ್ನು ಪ್ರೀತಿಸಿದಾಗ ಅವರ ವ್ಯಕ್ತಿತ್ವ ರೂಪಗೊಳ್ಳುತ್ತದೆ. ಜಗತ್ತು ಗೌರವಿಸೋದು ಜ್ಞಾನಕ್ಕೆ, ಅದನ್ನು ಪಡೆಯಲು ಪುಸ್ತಕವನ್ನು ಪ್ರೀತಿಸಬೇಕು. ಮುಗಿದುಹೋಗದ, ದಿನಾಂಕ ಇಲ್ಲದ ಜಗತ್ತಿನ ಒಂದು ಅದ್ಬುತವಾದ ವಸ್ತು ಎಂದರೆ ಪುಸ್ತಕ, ಅದನ್ನು ಪ್ರೀತಿಸಿದರೆ ಮಾತ್ರ ನಿಮ್ಮ ಗುರಿ ಮುಟ್ಟಿ ಸಮಾಜಕ್ಕೆ ಏನಾದ್ರು ಕುಡುಗೆ ಕೊಡಲು ಸಾಧ್ಯ ಎಂದರು.
ಈ ವೇಳೆ ಸಂಸ್ಥೆಯ ಆಡಳಿತಾಧಿಕಾರಿ ಮುನ್ನಾ ಸಿರಸಗಿ ಅವರು ಮಾತನಾಡಿ, ಪಾಲಕರ ಸಹಕಾರ ಮತ್ತು ಶಿಕ್ಷಕರ ಶ್ರಮದಿಂದ ಮಾತ್ರ ಮಕ್ಕಳ ಭವಿಷ್ಯ ಉಜ್ವಲವಾಗಲು ಸಾಧ್ಯ. ಶಿಕ್ಷಣ ಸಂಸ್ಥೆಯೊಂದಿಗೆ ಪಾಲಕರ ಸಂಪರ್ಕ ನಿರಂತರವಾಗಿರಬೇಕು. ಅಂದಾಗ ನಿಮ್ಮ ಮಗುವಿನ ಪರಿಪೂರ್ಣ ಮಾಹಿತಿ ಸಿಗುತ್ತೆ. ಮಕ್ಕಳ ಸರ್ವಾಂಗೀಣ ಪ್ರಗತಿಯ ಶಿಕ್ಷಣ ಕೊಡಲು ಸಂಸ್ಥೆ ಸನ್ನದ್ಧವಾಗಿದ್ದು, ನಿಮ್ಮ ಸಹಕಾರ ಕೊರತೆ ಇದಕ್ಕೆ ತೊಡಕಾಗಬಾರದು. ಇಂದು ನಿಮ್ಮ ಆದರ್ಶ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುತ್ತಿರುವ ಎಷ್ಟೋ ಮಕ್ಕಳ ಪಾಲಕರು ಬಡವರಗಿದ್ದು, ಅಂತಹ ವಿದ್ಯಾರ್ಥಿಗಳಿಗೆ ಸಂಸ್ಥೆ ಉಚಿತ ಶಿಕ್ಷಣ ನೀಡುತ್ತಿದೆ, ಇದು ಸಮಾಜಕ್ಕೆ ನಮ್ಮದೊಂದು ಅಳಿಲು ಸೇವೆ ಎಂದರು.
ಆದರ್ಶ ಸಮೂಹ ಶಿಕ್ಷಣ ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರು ಮತ್ತು ಉಪನ್ಯಾಸಕರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡ ಪಾಲಕರು ತಮ್ಮದೇಯಾದ ವಿಚಾರ ವಿನಿಮಯ ಮತ್ತು ಸಲಹೆ ಸೂಚನೆಗಳನ್ನು ನೀಡುವ ಮೂಲಕ ಪಾಲಕ ಪೋಷಕರು ಮತ್ತು ವಿದ್ಯಾರ್ಥಿಗಳ ಸಮಾಗಮದ ಈ ಸಭೆ ಅದ್ಭುತ ವಿಚಾರ ಸಂಕಿರ್ಣ ಮತ್ತು ಶೈಕ್ಷಣಿಕ ಪ್ರಯೋಗಶೀಲತೆಗೆ ಸಾಕ್ಷಿಯಾಯಿತು.

