ಸಿಂದಗಿ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿ ದಲಿತ ಮುಖಂಡರಿಂದ ಮನವಿ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಯಾವುದೇ ಆಸ್ತಿ ಅಡವಾಗಿ ನೀಡದಿದ್ದರೂ ಆಸ್ತಿ ಮೇಲೆ ಬೋಜಾ ದಾಖಲಿಸಿದ ಸಿಂದಗಿ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ದಲಿತ ಮುಖಂಡರು ಶನಿವಾರ ತಾಲೂಕು ಆಡಳಿತ ಸೌಧದ ಮುಂದೆ ಪ್ರತಿಭಟನೆ ನಡೆಸಿ ಗ್ರೇಡ್-೨ ತಹಶೀಲ್ದಾರ್ ಇಂದಿರಾಬಾಯಿ ಬಳಗಾನೂರ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಈ ವೇಳೆ ದಸಂಸ ಜಿಲ್ಲಾ ಸಂಚಾಲಕ ವೈ.ಸಿ. ಮಯೂರ, ಸಂತೋಷ ಮಣಗೀರಿ ಮಾತನಾಡಿ, ಸಿಂದಗಿ ಪಟ್ಟಣದ ನಿವಾಸಿ ಪ್ರವೀಣ ಹಾಲಹಳ್ಳಿ ಅವರಿಗೆ ಸೇರಿದ ಸಿಂದಗಿ ಸ.ನಂ. ೯೯೩/೪ರ ೨೦ ಗುಂಟೆ, ೯೯೩/೫ರ ೧೧ ಗುಂಟೆ ಆಸ್ತಿಯ ಮೇಲೆ ಸಿಂದಗಿ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ರೂ.೧.೮೪ಕೋಟಿ ಬೋಜಾವನ್ನು ಬಾಗಲಕೋಟೆಯ ಬಸವೇಶ್ವರ ಸಹಕಾರಿ ಬ್ಯಾಂಕಿನ ಹೆಸರಿನಲ್ಲಿ ದಾಖಲಿಸಿದ್ದಾರೆ ಎಂದು ಆರೋಪಿಸಿದರು.
ಕೂಡಲೇ ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು. ದಲಿತ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಪ್ರವೀಣ ಹಾಲಹಳ್ಳಿ, ಮಾಜಿ ಸೈನಿಕ ಶಬ್ಬಿರಪಟೇಲ ಬಿರಾದಾರ, ಶರಣು ಚಲವಾದಿ, ಮಹೇಶ ಜಾಬಣ್ಣವರ, ರವಿ ಹೊಳಿ, ರಮೇಶ ಚಟ್ನಳ್ಳಿ ಸೇರಿದಂತೆ ದಲಿತ ಮುಖಂಡರು ಪ್ರತಿಭಟನೆಯಲ್ಲಿ ಇದ್ದರು.

