ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪರಿಸರ ಸಂರಕ್ಷಿಸುವ ಕೆಲಸದಲ್ಲಿ ನಾವೆಲ್ಲರೂ ಕೈಜೋಡಿಸಬೇಕು. ನಮ್ಮ ಪರಿಸರ ಪ್ರೀತಿಯ ಕೆಲಸ ಮುಂದಿನ ಜನಾಂಗದವರಿಗೆ ಸ್ಪೂರ್ತಿಯಾಗಬೇಕು. ನಾವು ನೆಟ್ಟ ಗಿಡಗಳು ದೊಡ್ಡದಾದಾಗ ಅವುಗಳಿಂದ ಸಿಗುವ ಖುಷಿ ದೊಡ್ಡದು ಎಂದು ಪಿಎಸ್‌ಐ ಸಂಜಯ ತಿಪರೆಡ್ಡಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಅರಣ್ಯ ಇಲಾಖೆ, ಪುರಸಭೆ, ಹಸಿರು ತೋರಣ ಗೆಳೆಯರ ಬಳಗದ ಸಹಯೋಗದೊಂದಿಗೆ ಗಿಡಗಳನ್ನು ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ ಮಾತನಾಡಿ, ಪರಿಸರ ಸಂರಕ್ಷಣೆ ವಿಷಯದಲ್ಲಿ ನಾಗರಿಕರಿಗೆ ಎಲ್ಲ ರೀತಿಯ ನೆರವು ನೀಡುತ್ತೇವೆ. ಮುದ್ದೇಬಿಹಾಳ ಪಟ್ಟಣದ ಸೌಂದರ್ಯ ವರ್ಧನೆಗೆ ಜೆಸಿಬಿ, ನೀರು, ಅಲ್ಲಲ್ಲಿ ಸಾರ್ವಜನಿಕ ಆಸನಗಳ ಜೋಡಣೆಗೆ ಆದ್ಯತೆ ನೀಡುತ್ತೇವೆ. “ಅಮೃತ ಮಿತ್ರ” ಯೋಜನೆಯ ಅಡಿಯಲ್ಲಿ ಇನ್ನೂ ಹತ್ತು ಉದ್ಯಾನವನಗಳನ್ನು ತಲಾ ಹತ್ತು ಲಕ್ಷ ರೂ ಅನುದಾನದಲ್ಲಿ ಅಭಿವೃದ್ಧಿ ಮಾಡಲಾಗುವುದು ಎಂದರು.
ಪುರಸಭೆ ಉಪಾಧ್ಯಕ್ಷೆ ಪ್ರೀತಿ ಶರಣು ದೇಗಿನಾಳ ಮಾತನಾಡಿ, ಮುದ್ದೇಬಿಹಾಳ ಪಟ್ಟಣದಲ್ಲಿ ಮೊದಲು ಗಿಡಗಳು ಕಾಣುತ್ತಿರಲಿಲ್ಲ. ಈಗ ಹಸಿರು ತೋರಣ ಬಳಗದಿಂದಾಗಿ ಗಿಡಗಳು ಬೆಳೆದು ನಿಂತು ಎಲ್ಲೆಡೆ ಒಳ್ಳೆಯ ಆರೋಗ್ಯಕರ ಹಸಿರು ಪರಿಸರ ನಿರ್ಮಾಣವಾಗಿದೆ ಎಂದರು.
ಹತೋಗೆಬ ಸಂಚಾಲಕ ಮಹಾಬಲೇಶ್ವರ ಗಡೇದ ಮಾತನಾಡಿ, ಪಟ್ಟಣದಲ್ಲಿರುವ ಉದ್ಯಾನವನಗಳನ್ನು ಗುರುತಿಸಿ, ಅಲ್ಲಿ ನಾಮಫಲಕ, ತಂತಿ ಬೇಲಿ ಹಚ್ಚುವ ಕೆಲಸ ನಡೆಯಬೇಕು. ಉದ್ಯಾನವನಗಳಲ್ಲಿ ಗಿಡಗಳನ್ನು ನೆಡಲು ಜೆಸಿಬಿ ನೀಡಬೇಕು. ನಾಗರಿಕರು ತಮ್ಮ ಬಡಾವಣೆಗಳಲ್ಲಿ ಇರುವ ಉದ್ಯಾನವನಗಳಲ್ಲಿ ಗಿಡಗಳನ್ನು ನೆಡಲು ಮುಂದೆ ಬರಬೇಕು ಎಂದರು.
ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ, ಹಸಿರು ತೋರಣ ಬಳಗದ ಅಧ್ಯಕ್ಷ ಬಿ.ಎಚ್.ಬಳಬಟ್ಟಿ, ಮಾಜಿ ಅಧ್ಯಕ್ಷ ರವಿ ಗೂಳಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಗಿಡಗಳನ್ನು ನೆಟ್ಟು ನೀರೆರೆಯಲಾಯಿತು. ಕಾರ್ಯಕ್ರಮದಲ್ಲಿ ಪುರಸಭೆಯ ಸದಸ್ಯೆಯರುಗಳಾದ ಸಹನಾ ಬಡಿಗೇರ, ಭಾರತಿ ಪಾಟೀಲ, ಹತೋಗೆಬ ಕಾರ್ಯದರ್ಶಿ ಅಮರೇಶ ಗೂಳಿ, ಉಪಾಧ್ಯಕ್ಷ ಸೋಮಶೇಖರ ಚೀರಲದಿನ್ನಿ, ಮಾಜಿ ಅಧ್ಯಕ್ಷರಾದ ಬಿ.ಎಸ್.ಮೇಟಿ, ಅಶೋಕ ರೇವಡಿ, ರಾಜಶೇಖರ ಕಲ್ಯಾಣಮಠ, ಸದಸ್ಯರಾದ ಮಲ್ಲಿಕಾರ್ಜುನ ಬಾಗೇವಾಡಿ, ಸುರೇಶ ಕಲಾಲ, ಬಸವರಾಜ ಬಿಜ್ಜೂರ, ಡಾ.ವಿಜಯಕುಮಾರ ಗೂಳಿ, ಡಾ. ಚಂದ್ರಶೇಖರ ಶಿವಯೋಗಿಮಠ, ಶ್ರೀಕಾಂತ ಕಡೂರ ವಕೀಲರು, ಲೋಹಿತ್ ನಾಲತವಾಡ, ಆದಿನಾಥ ಪಂಡಿತ, ವಿಜಯ ಬಡಿಗೇರ, ಪ್ರಕಾಶ ಪೂಜಾರಿ, ರವಿ ಲಮಾಣಿ, ಹಣಮಂತ ದೇವರಳ್ಳಿ, ಸೇರಿದಂತೆ ಅರಣ್ಯ ಇಲಾಖೆ, ಪುರಸಭೆ, ಬಳಗದ ಸದಸ್ಯರಿದ್ದರು. ಪರಮಾನಂದ ಪಾಟೀಲ ಪ್ರಾರ್ಥಿಸಿದರು. ಸಾಹಿತಿ ಸಿದ್ದನಗೌಡ ಬಿಜ್ಜೂರ ಪರಿಸರ ಗೀತೆ ಹಾಡಿದರು. ಬಳಗದ ಸಂಚಾಲಕ ಮಹಾಬಲೇಶ್ವರ ಗಡೇದ ಸ್ವಾಗತಿಸಿ, ನಿರೂಪಿಸಿದರು. ಸಂಗಮೇಶ ಚಲವಾದಿ ವಂದಿಸಿದರು.

