ರಾಜ್ಯ ಸರ್ಕಾರದ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಾರಿಗೆ ಸಂಸ್ಥೆಗಳನ್ನು ಆರ್ಥಿಕವಾಗಿ ಸದೃಢಗೊಳಿಸಬೇಕಾಗಿದ್ದ ಸರ್ಕಾರವು ತನ್ನ ವೋಟ್ ಬ್ಯಾಂಕ್ ರಾಜಕಾರಣಕ್ಕೆ ನಷ್ಟಕ್ಕೆ ನೂಕಿದೆ. ಭವಿಷ್ಯ ನಿಧಿ (ಪಿ.ಎಫ್) ಪಾವತಿ ಮಾಡುವುದಕ್ಕೂ ಹಣವಿಲ್ಲದೆ ಈಗ ಅದಕ್ಕೂ ಸಾಲ ಮಾಡಲು ನಿರ್ಧರಿಸಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿಕಾರಿದ್ದಾರೆ.
ಎರಡು ದಿನಗಳ ಹಿಂದೆಯಷ್ಟೇ ‘ಶಕ್ತಿ’ ಯೋಜನೆಯ ಬಗ್ಗೆ ಸರ್ಕಾರ ಎಲ್ಲಾ ಪತ್ರಿಕೆಗಳಲ್ಲಿ, ಜಾಲತಾಣಗಳಲ್ಲಿ ಯೋಜನೆಯ ಯಶಸ್ಸಿನ ಬಗ್ಗೆ ಜಾಹೀರಾತು ನೀಡಿತ್ತು. ಸಾರಿಗೆ ನೌಕರರಿಗೆ 38 ತಿಂಗಳ ಭತ್ಯೆ ಮತ್ತು ವೇತನ ಹೆಚ್ಚಳ ಮಾಡದೆ ಇರುವುದರಿಂದ ಮುಷ್ಕರ ಮಾಡುವುದಾಗಿ ಕರೆ ಕೊಟ್ಟಿದ್ದಾರೆ.
ಆರ್ಥಿಕ ತಜ್ಞ, ಅತಿ ಹೆಚ್ಚು ಬಜೆಟ್ ಕೊಟ್ಟ ಮುಖ್ಯಮಂತ್ರಿಗಳು ರಾಜ್ಯವನ್ನು ಸಾಲದ ಸುಳಿಗೆ ನೂಕಿದ್ದಾರೆ. ರಾಜ್ಯದ ಬೊಕ್ಕಸಕ್ಕೆ ಗ್ಯಾರಂಟಿ ಯೋಜನೆಗಳು ಹೊರೆಯಾಗಿವೆ ಎಂಬುದು ಗೊತ್ತಿರುವ ವಿಷಯವೇ. ಕಾಂಗ್ರೆಸ್ ಪಕ್ಷಕ್ಕೆ ವೋಟ್ ಬ್ಯಾಂಕ್ ರಾಜಕಾರಣ ಮಾಡಲು ಗ್ಯಾರಂಟಿ ಯೋಜನೆಗಳು ಬೇಕಾದವೇ ಹೊರತು ಜನರ ಏಳಿಗೆಗೆ, ಅಭ್ಯುದಯಕ್ಕೆ, ಕಲ್ಯಾಣಕ್ಕಲ್ಲ ಎಂದು ಎಕ್ಸ್ ಖಾತೆಯಲ್ಲಿ ಟ್ವಿಟ್ ಮಾಡಿದ್ದಾರೆ.

