ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಸರಕಾರದಲ್ಲಿ ಹಣವಿಲ್ಲವೆಂದು ಟೀಕೆ ಟಿಪ್ಪಣಿ ಮಾಡುವವರಿಗೆ ೫೦೦ಕೋಟಿ ಮಹಿಳೆಯರ ಉಚಿತವಾಗಿ ಪ್ರಯಾಣಿಸಿರುವುದೇ ಸಾಕ್ಷಿಯಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಸಿಂದಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಸರಕಾರದ ಶಕ್ತಿ ಯೋಜನೆಯ ಫಲಾನುಭವಿಗಳ ಸಂಖ್ಯೆ ೫೦೦ಕೋಟಿ ಗಡಿಯನ್ನು ದಾಟಿರುವ ಹಿನ್ನೆಲೆಯಲ್ಲಿ ಶಾಸಕ ಅಶೋಕ ಮನಗೂಳಿ ಮಹಿಳೆಯರಿಗೆ ಸಿಹಿ ಹಂಚಿ ಸಂಭ್ರಮಿಸಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯಲ್ಲಿ ೧೩ಕೋಟಿಗೂ ಅಧಿಕ ಮಹಿಳೆಯರು ಇಲ್ಲಿಯವರೆಗೂ ಪ್ರಯಾಣ ಮಾಡಿದ್ದಾರೆ. ಹಣವಿಲ್ಲ, ಅಭಿವೃದ್ಧಿ ಕುಂಠಿತಗೊಂಡಿದೆ ಎನ್ನುವವರಿಗೆ ಇದು ಉತ್ತರ. ನುಡಿದಂತೆ ನಡೆದ ಸರ್ಕಾರ ರಾಜ್ಯದ ಕಾಂಗ್ರೆಸ್ ಸರ್ಕಾರ ಪ್ರತಿಕ್ಷಣವೂ, ಪ್ರತಿದಿನವೂ ಬಡವರ, ಹಿಂದುಳಿದವರ, ನಿರ್ಗತಿಕರ ಬಗ್ಗೆ ಸದಾ ಕಾಳಜಿ ಉಳ್ಳಂತಹ ಸರ್ಕಾರ ನಮ್ಮದಾಗಿದೆ ಎಂದರು.
ಈ ವೇಳೆ ಗ್ಯಾರಂಟಿ ಸಮಿತಿ ತಾಲೂಕಾಧ್ಯಕ್ಷ ಶ್ರೀಶೈಲ ಕವಲಗಿ, ಬ್ಲಾಕ್ ಕಾಂಗ್ರೆಸ್ ಸಮಿತಿ ತಾಲೂಕಾಧ್ಯಕ್ಷ ಸುರೇಶ ಪೂಜಾರಿ, ಸದಸ್ಯರಾದ ಮೋಷನ ಬೀಳಗಿ, ಪರಶುರಾಮ ಉಪ್ಪಾರ, ಶಿವಾನಂದ ಹಡಪದ, ರಜತ ತಾಂಬೆ, ಸುನಂದಾ ಯಂಪುರೆ, ಅಂಬರೀಶ ಚೌಗಲೆ, ಜಿಲ್ಲಾ ಕೆಡಿಪಿ ಸದಸ್ಯ ನೂರಅಹ್ಮದ ಅತ್ತಾರ, ತಾಲೂಕು ಕೆಡಿಪಿ ಸದಸ್ಯೆ ಮಹಾನಂದ ಬಮ್ಮಣ್ಣಿ, ಜಯಶ್ರೀ ಹದನೂರ, ಚನ್ನಪ್ಪ ಗೋಣಿ ಸೇರಿದಂತೆ ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಇದ್ದರು.

