ಸಿಂದಗಿಯಲ್ಲಿ ವಿದ್ಯಾಚೇತನ ಪ್ರಕಾಶನದಿಂದ ರಾಜ್ಯ ಮಟ್ಟದ ಬಾಲ ಸಾಹಿತ್ಯ ಪುರಸ್ಕಾರ ಪ್ರಶಸ್ತಿ ಪ್ರಧಾನ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಮಕ್ಕಳ ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ರಚಿತವಾದ ಸಾಹಿತ್ಯವೇ ನಿಜವಾದ ಮಕ್ಕಳ ಸಾಹಿತ್ಯ. ಈ ನಿಟ್ಟಿನಲ್ಲಿ ಸಿಂದಗಿ ತಾಲೂಕು ಮಕ್ಕಳ ಸಾಹಿತ್ಯ ಕೃಷಿಯಲ್ಲಿ ಸಾಕಷ್ಟು ಕೆಲಸ ಮಾಡಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಸಾರಂಗಮಠದ ಆವರಣದಲ್ಲಿ ರವಿವಾರ ಹಮ್ಮಿಕೊಂಡ ವಿದ್ಯಾಚೇತನ ಪ್ರಕಾಶನ ಸಿಂದಗಿ ಅವರು ಕೊಡಮಾಡುವ ರಾಜ್ಯ ಮಟ್ಟದ ಬಾಲ ಸಾಹಿತ್ಯ ಪುರಸ್ಕಾರ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಕ್ಕಳ ಸಾಹಿತಿ ಹ.ಮ. ಪೂಜಾರ ಅವರು ತಮ್ಮ ೮೫ನೇ ಇಳಿ ವಯಸ್ಸಿನಲ್ಲಿಯೂ ತಮ್ಮ ಪಿಂಚಣಿ ಹಣದಲ್ಲಿ ರಾಜ್ಯ ಮಟ್ಟದ ಬಾಲ ಸಾಹಿತ್ಯ ಪುರಸ್ಕಾರ ಪ್ರಶಸ್ತಿ ಪ್ರಧಾನ ಮಾಡುವ ಮೂಲಕ ಮಕ್ಕಳ ಸಾಹಿತ್ಯ ಪುರಸ್ಕಾರಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದರು.
ಹ.ಮ. ಪೂಜಾರ ಅವರ ಆಶೆಯಂತೆ ಇದೇ ಡಿಶೆಂಬರ ಒಳಗಾಗಿ ಪಟ್ಟಣದಲ್ಲಿ ಬಾಲಭವನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬೆಂಗಳೂರಿನ ವಸುವತ್ಸಲೆ ಅವರ ಅಂತರಿಕ್ಷದಲ್ಲಿ ವಿಹಾ ಕಥಾ ಸಂಕಲನ, ತುಮಕೂರು ನಗರದ ಬ್ಯಾಡನೂರು ನಾಗಭೂಷಣರ ಮಿನುಗುವ ಮನುಷ್ಯ ಕಾದಂಬರಿ, ಬೀಳಗಿ ಪಟ್ಟಣದ ಸೋಮಲಿಂಗ ಬೇಡರ ಅವರ ಬಾರೆ ಚುಕ್ಕಿ ಬೆಳ್ಳಿಚುಕ್ಕಿ ಕವನ ಸಂಕಲನಕ್ಕೆ ಬಾಲಸಾಹಿತ್ಯ ಪುರಸ್ಕಾರ ಪ್ರಶಸ್ತಿ ಪ್ರಧಾನ ಮಾಡಿ ೫ ಸಾವಿರ ರೂ. ನಗದು ಮ್ತತು ಪ್ರಶಸ್ತಿ ಫಲಕದೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು. ಮಕ್ಕಳ ವಿಭಾಗದ ಚಿಗುರು ಪ್ರಶಸ್ತಿಯನ್ನು ಆಲಮೇಲ ತಾಲೂಕಿನ ಕಡಣಿ ಗ್ರಾಮದ ನವ್ಯ ಕತ್ತಿ ಅವರ ಮಾಯಾಗುಹೆ ಕಥಾ ಸಂಕಲನಕ್ಕೆ ಮತ್ತು ಉಡುಪಿ ಜಿಲ್ಲೆಯ ಸಿದ್ದಾಪುರ ಪಟ್ಟಣದ ಎಚ್.ವಿಧಾತ್ರೀ ರವಿಶಂಕರ ಅವರ ನಕ್ಷತ್ರ ಪಟಲ ಕವನ ಸಂಕಲನಕ್ಕೆ ಪ್ರಶಸ್ತಿ ಪ್ರಧಾನ ೨ ಸಾವಿರ ನಗದು ಮತ್ತು ಪ್ರಶಸ್ತಿ ಫಲಕದೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು.
ಪ್ರಶಸ್ತಿ ಪುರಸ್ಕೃತರಾದ ವಸು ವಸತ್ಸಲೆ, ನಾಗಭೂಷಣ, ಸೋಮಲಿಂಗ ಬೇಡರ್, ನವ್ಯ ಕತ್ತಿ, ಎಚ್.ವಿಧ್ಯಾತ್ರೀ ಮಾತನಾಡಿ, ವಿದ್ಯಾಚೇತನ ಪ್ರಕಾಶನ ಕೊಡಮಾಡಿದ ಪ್ರಶಸ್ತಿಯು ಸರ್ಕಾರ, ಅಕಾಡೆಮಿ ನೀಡುವ ಪ್ರಶಸ್ತಿಗಿಂತಲೂ ಹೆಚ್ಚಿದೆ. ತಮ್ಮ ೮೫ನೇ ಇಳಿ ವಯಸ್ಸಿನಲ್ಲಿ ಹ.ಮ. ಪೂಜಾರ ಅವರ ಮಕ್ಕಳ ಸಾಹಿತ್ಯ ಸೇವೆ ನಮಗೆಲ್ಲ ಮಾದರಿಯಾಗಿದೆ ಎಂದು ಹೇಳಿದರು.
ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದರು.
ಮಕ್ಕಳ ಸಾಹಿತಿ, ವಿದ್ಯಾಚೇತನ ಪ್ರಕಾಶನದ ಪ್ರಕಾಶಕ ಹ.ಮ. ಪೂಜಾರ ಮಾತನಾಡಿ, ಮಕ್ಕಳಲ್ಲಿ ಓದುವ, ಬರೆಯುವ ಹವ್ಯಾಸ ಬೆಳೆಸಬೇಕು, ಅವರಲ್ಲಿ ಮೌಲ್ಯಗಳನ್ನು ತುಂಬಬೇಕು. ಅವರು ಮೌಲ್ಯಾಧಾರಿತ ಬದುಕನ್ನು ಕಟ್ಟಿಕೊಳ್ಳಬೇಕು ಎಂಬುದು ನನ್ನ ಮಹದಾಶೆ. ಈ ನಿಟ್ಟಿನಲ್ಲಿ ಕಳೆದ ೫೦ ವರ್ಷದಿಂದ ಮಕ್ಕಳ ಬಳಗ ಕಟ್ಟಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕ ಕಾರ್ಯಕ್ರಮ, ಕಳೆದ ೩೦ ವರ್ಷದಿಂದ ವಿದ್ಯಾಚೇತನ ಪ್ರಕಾಶನ ಪ್ರಾರಂಭಿಸಿ ಮಕ್ಕಳ ಸಾಹಿತ್ಯ ಕೃಷಿ ಮಾಡಲಾಗುತ್ತಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಜಾನಪದ ಸಾಹಿತಿ ಡಾ.ಎಂ.ಎಂ. ಪಡಶೆಟ್ಟಿ ಮಾತನಾಡಿದರು. ಸಾರಂಗಮಠ-ಗಚ್ಚಿನಮಠದ ಗುರುಕುಲ ಬಾಸ್ಕರ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಸಾರಂಗಮಠ-ಗಚ್ಚಿನಮಠದ ಉತ್ತರಾಧಿಕಾರಿಗಳಾದ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ಸಮ್ಮುಖ ವಹಿಸಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಎಂ.ಎಂ. ಹೂಗಾರ, ಸಿ.ಎಂ. ಪೂಜಾರಿ, ಬಿ.ಎನ್. ಬಿರಾದಾರ, ವಿ.ಡಿ. ವಸ್ತçದ, ಪ್ರಾಚಾರ್ಯ ಎ.ಆರ್. ಹೆಗ್ಗನದೊಡ್ಡಿ, ಕನ್ನಡ ಸಾಹಿತ್ಯ ಪರಿಷತ್ ತಾಲೂಕಾ ಮಾಜಿ ಅಧ್ಯಕ್ಷ ಚಂದ್ರಶೇಖರ ದೇವರೆಡ್ಡಿ, ಬಿ.ಪಿ. ಕರ್ಜಗಿ, ಎಚ್.ಎಂ. ಉತ್ನಾಳ, ಶಿವಪ್ಪ ಗವಸಾನಿ, ಡಾ.ಶರಣಬಸು ಜೋಗೂರ, ಕರ್ನಾಟಕ ರಾಜ್ಯ ನಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಬಸವರಾಜ ಹೂಗಾರ, ಶಕುಂತಲಾ ಹಿರೇಮಠ, ಡಾ.ರಮೇಶ ಕತ್ತಿ, ಬಸಯ್ಯ ಹಿರೇಮಠ ಸೇರಿದಂತೆ ಶಾಲಾ-ಕಾಲೇಜಿನ ವಿದ್ಯಾರ್ಥಿನಿಯರು ಹಾಗೂ ಸಾಹಿತ್ಯಾಸಕ್ತರು ಭಾಗವಹಿಸಿದ್ದರು. ಶಿಕ್ಷಕ ಶಂಕರ ಕಟ್ಟಿಮನಿ ಪ್ರಾರ್ಥನೆ ಹಾಡಿದರು. ಮಕ್ಕಳ ಸಾಹಿತಿ ಎಸ್.ಎಸ್. ಸಾತಿಹಾಳ ಸ್ವಾಗತಿಸಿದರು. ಶಿಕ್ಷಕ ಸತಿಶ ಕುಲಕರ್ಣಿ ನಿರೂಪಿಸಿದರು. ಮಕ್ಕಳ ಸಾಹಿತಿ ಶಿವಕುಮಾರ ಶಿವಸಿಂಪಿಗೆರ ವಂದಿಸಿದರು.

“ಮಕ್ಕಳ ಸಾಹಿತಿ ಹ.ಮ. ಪೂಜಾರ ಅವರು ಮಾಡುವ ಕಾರ್ಯಕ್ರಮಗಳು ಮಕ್ಕಳ ಮತ್ತು ಮಕ್ಕಳ ಸಾಹಿತ್ಯಕ್ಕೆ ಪೂರಕವಾಗಿವೆ. ಅವರನ್ನು ಗೌರವಿಸುವುದು ನಾಡಿನ ಮಕ್ಕಳಿಗೆ ಗೌರವಿಸಿದಹಾಗೆ. ಅವರ ಮಕ್ಕಳ ಸಾಹಿತ್ಯ ಸೇವೆಯನ್ನು ಕರ್ನಾಟಕ ರಾಜ್ಯ ಬಾಲವಿಕಾಸ ಅಕಾಡೆಮಿ ತಗೆದುಕೊಳ್ಳುತ್ತಿದೆ.”
– ಸಂಗಮೇಶ ಬಬಲೇಶ್ವರ
ಅಧ್ಯಕ್ಷರು, ಕರ್ನಾಟಕ ಬಾಲವಿಕಾಸ ಅಕಾಡೆಮಿ

