ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಸಾರ್ವಜನಿಕರು ಹಾಗೂ ರೈತಸಮುದಾಯದ ಹಿತದೃಷ್ಟಿಯಿಂದ ಸರ್ಕಾರದ ವಿವಿಧ ಇಲಾಖೆಗಳನ್ನೊಳಗೊಂಡ ತಾಲ್ಲೂಕು ಆಡಳಿತ ಸೌಧವನ್ನು ಪಶು ವೈದ್ಯಕೀಯ ಇಲಾಖೆಯ ಆವರಣದಲ್ಲಿ ನಿರ್ಮಿಸುವಂತಾಗಲಿ ಎಂದು ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಸಂಗನಗೌಡ ಹರನಾಳ ಹೇಳಿದ್ದಾರೆ.
ಪಟ್ಟಣದಲ್ಲಿ ಭಾನುವಾರ ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿ, ತಾಲ್ಲೂಕು ಆಡಳಿತ ಸೌಧಕ್ಕಾಗಿ ವಿಜಯಪುರ ರಸ್ತೆಯಲ್ಲಿಯ ಸರ್ವೆ ನಂ೫೧೨/*/೦೨ನ್ನು ಗುರುತಿಸಿ ಮಿಸಲಾಗಿಟ್ಟ ಜಾಗ ಎಂದು ನಾಮಫಲಕ ನಿಲ್ಲಿಸಲಾಗಿದೆ. ಆದರೆ ವಾಸ್ತವಿಕವಾಗಿ ಈ ಜಾಗ ಪಟ್ಟಣದಿಂದ ೨ ಕಿ.ಮೀ ದೂರದಲ್ಲಿದೆ. ಇಲ್ಲಿ ಎಲ್ಲ ಇಲಾಖೆಗಳ ಕಚೇರಿಗಳನ್ನೊಳಗೊಂಡ ಸೌಧ ನಿರ್ಮಾಣವಾದರೆ ರೈತರು, ಮಹಿಳೆಯರು ಸಹಿತ ಸಾರ್ವಜನಿಕರು ತೆರಳಿ ತಮ್ಮ ಅಗತ್ಯ ಕಾರ್ಯ ಮಾಡಿಕೊಳ್ಳಲು ಹಣ ಹಾಗೂ ಸಮಯವನ್ನು ವ್ಯಯ ಮಾಡಬೇಕಾಗುತ್ತದೆ. ಆದ್ದರಿಂದ ಆಡಳಿತ ಸೌಧವನ್ನು ಅಂಬೇಡ್ಕರ್ ವೃತ್ತದಲ್ಲಿರುವ ಪಶು ಇಲಾಖೆಯ ಆವರಣದಲ್ಲಿ ನಿರ್ಮಿಸುವಂತಾಗಬೇಕು. ಇಗೀರುವ ಪಶುವೈದ್ಯಕೀಯ ಆಸ್ಪತ್ರೆ ವಿಶಾಲ ಜಾಗ ಹೊಂದಿದ್ದು ಪಟ್ಟಣದ ಮಧ್ಯೆ ಭಾಗದಲ್ಲಿದೆ. ಇದು ಆಡಳಿತಸೌಧಕ್ಕೆ ಎಲ್ಲ ರೀತಿಯಿಂದಲೂ ಸೂಕ್ತ ಜಾಗವಾಗಿದೆ.
ಪಶು ವೈದ್ಯಕೀಯ ಆಸ್ಪತ್ರೆಯನ್ನು ಇಂಡಿ ರಸ್ತೆಯಲ್ಲಿ ಅತಿಕ್ರಮಣಗೊಂಡ ಆಸ್ತಿ ಸಂಖ್ಯೆ ೫೫೭ಕ್ಕೆ ವರ್ಗಾವಣೆ ಮಾಡಬಹುದು. ಹೇಗಿದ್ದರೂ ಇದು ೨ ಎಕರೆ ೩೦ ಗುಂಟೆಯಾಗಿದೆ. ಇಲ್ಲಿ ಪಶು ಆಸ್ಪತ್ರೆ ನಿರ್ಮಿಸಿದರೆ ಯಾವುದೇ ಅಡತಡೆಗಳಿಲ್ಲ.
ಸಾರ್ವಜನಿಕರ ಒಳಿತಿಗಾಗಿ ತಾಲ್ಲೂಕು ಆಡಳಿತ ಸೌಧ ಪಶು ಆಸ್ಪತ್ರೆಯ ಆವರಣದಲ್ಲಿ ನಿರ್ಮಿಸಲು ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ.ಪಾಟೀಲರು ಸ್ಚಲ್ಪ ಮುತುವರ್ಜಿ ವಹಿಸಿದರೆ ಸಾಕು. ಕೆಲವೇ ದಿನಗಳಲ್ಲಿ ಸುಸಜ್ಜಿತ ಸೌಧ ನಿರ್ಮಾಣವಾಗಿ ಜನತೆಯ ಬಹುದಿನದ ಕನಸು ನನಸಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಆದ್ದರಿಂದ ಸಚಿವರು ಈ ಕುರಿತು ಪರಿಶೀಲಿಸಲಿ ಎಂದು ವಿನಂತಿಸಿದ್ದಾರೆ.

