ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ತಾಲೂಕು ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು, ವಿಸ್ತೀರ್ಣದಲ್ಲಿಯೂ ದೊಡ್ಡದಾಗಿದೆ. ಸಿಂದಗಿಯು ಭೌಗೋಳಿಕವಾಗಿ ಕೇಂದ್ರಸ್ಥಾನದಲ್ಲಿದ್ದು, ಸುತ್ತ ಮುತ್ತಲಿನ ಕಲಬುರುಗಿ, ಯಾದಗಿರಿ, ರಾಯಚೂರ, ವಿಜಯಪೂರ ಜಿಲ್ಲೆಗಳ ಹೆಚ್ಚಿನ ಸಂಪರ್ಕ ಹೊಂದಿದೆ. ಮತ್ತು ಕಂದಾಯ ಇಲಾಖೆಯಲ್ಲಿ ಅತೀ ಹೆಚ್ಚಿನ ಆದಾಯವನ್ನು ಸಿಂದಗಿ ತಾಲೂಕಿನಿಂದ ಸಂಗ್ರಹವಾಗುತ್ತಿದೆ ಎಂದು ಮಾಜಿ ವಿಪ ಸದಸ್ಯ ಅರುಣ ಶಹಾಪೂರ ಹೇಳಿದರು.
ಸಿಂದಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಿಂದಗಿ ವ್ಯವಸ್ಥಿತ ನಗರ ವ್ಯವಸ್ಥೆಯನ್ನು ಹೊಂದಿದೆ. ಹಲವಾರು ಶಿಕ್ಷಣ ಸಂಸ್ಥೆಗಳು ಉತ್ತಮ ಬೋಧನೆ ಮಾಡುವದರೊಂದಿಗೆ ರಾಜ್ಯದಲ್ಲಿ ಹೆಸರುವಾಸಿಯಾಗಿ ಶೈಕ್ಷಣಿಕ ಕಾಶಿ ಎಂದನೆಸಿಕೊಂಡಿದೆ. ಹಾಗೂ ದಿನದ ೨೪ಗಂಟೆಯು ಉತ್ತಮ ಸಾರಿಗೆ ಸಂಪರ್ಕ ವ್ಯವಸ್ಥೆ ಇದ್ದು, ಮುಂಬೈ, ಚೆನೈ ವಾಣಿಜ್ಯ ಕಾರಿಡಾರ ಚತುಷ್ಕೋನ ರಸ್ತೆ ಸಿಂದಗಿ ನಗರಕ್ಕೆ ಸಮೀಪದಲ್ಲಿರುವುದು ಮತ್ತೊಂದು ಹೆಮ್ಮೆಯ ವಿಷಯವಾಗಿದೆ.
ರಾಷ್ಟ್ರೀಯ ಹೆದ್ದಾರಿ-೫೦ ಸಿಂದಗಿ ನಗರದೊಂದಿಗೆ ಸಂಪರ್ಕ ಬೆಸೆದಿದ್ದು, ಸಾರಿಗೆ ಸಂಪರ್ಕಕ್ಕೆ ಉತ್ತಮ ನಿದರ್ಶನವಾಗಿದೆ. ಶೇಡಬಾಳದಿಂದ ಶಾಹಾಬಾದ ರೇಲ್ವೇ ಮಾರ್ಗವು ಮುಂಬರುವ ದಿನಮಾನಗಳಲ್ಲಿ ನೂತನ ರೇಲ್ವೇ ಮಾರ್ಗ ಸೃಷ್ಟಿಯಾಗುವ ಲಕ್ಷಣಗಳಿದ್ದು, ಪೂರ್ವ ದಿಕ್ಕಿನಲ್ಲಿ ಕಲಬುರಗಿ ಹಾಗೂ ಪಶ್ಚಿಮದಲ್ಲಿ ವಿಜಯಪೂರ ಜಿಲ್ಲೆಯಲ್ಲಿ ವಿಮಾನ ನಿಲ್ದಾಣಗಳಿದ್ದು, ರಾಜ್ಯದ ರಾಜಧಾನಿ ಸಂಪರ್ಕಿಸಲು ಸಮಯದ ಉಳಿತಾಯವಾಗುವುದು. ಮತ್ತು ಉತ್ತಮ ಕೈಗಾರೀಕರಣ ವಲಯವಾಗಿ ಪರಿವರ್ತಿಸಲು ಕೇಂದ್ರ ಸ್ಥಾನದಲ್ಲಿದೆ. ಕಲ್ಯಾಣ ಕರ್ನಾಟಕ ಹಾಗೂ ಮುಂಬೈ ಕರ್ನಾಟಕದ ಹೆಬ್ಬಾಗಿಲು ಆಗಿ ಬೌಗೋಳಿಕವಾಗಿ ಎರಡು ವಲಯಗಳನ್ನು ಸಂಪರ್ಕಿಸಿ ಸಾಂಸ್ಕ್ರತಿಕ ಪ್ರತಿಬಿಂಬವಾಗಿದೆ ಎಂದರು.
ಉದ್ಯೋಗ, ವ್ಯಾಪಾರ, ಶಿಕ್ಷಣ, ಆರೋಗ್ಯ, ಕೃಷಿ ಮತ್ತು ತೋಟಗಾರಿಕಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಬಹು ಕ್ಷೇತ್ರದಲ್ಲಿ ಸಿಂದಗಿ ತನ್ನದೇ ಆದ ಛಾವು ಮೂಡಿಸಿದೆ. ಸಿಂದಗಿಯ ಲಿಂ.ಜಗದ್ಗುರು ತೋಂಟದ ಸಿದ್ದಲಿಂಗ ಸ್ವಾಮಿಗಳ ನೇತೃತ್ವದಲ್ಲಿ ನಡೆದ ಗೋಕಾಕ ಚಳುವಳಿ, ಹೈದ್ರಾಬಾದ ವಿಮೋಚನಾ ಚಳುವಳಿಯ ರೂವಾರಿ ಸ್ವಾಮಿ ರಮಾನಂದ ತೀರ್ಥರು ಸಿಂದಗಿಯವರು. ಈ ಭಾಗದ ಅನೇಕ ಹಳ್ಳಿಗಳು ನಿಜಾಮಶಾಹಿಯ ಆಡಳಿತಕ್ಕೆ ಒಳಪಟ್ಟಿರುವುದು ಇತಿಹಾಸವಾಗಿದೆ. ೧೮೫೭ರ ಸಿಪಾಯಿ ದಂಗೆಗೂ ಮೊದಲು ಬ್ರಿಟಿಷರ ತೆರಿಗೆ ನೀತಿಯನ್ನು ಖಂಡಿಸಿ, ೧೮೨೪ರಲ್ಲಿ ಬಂಡಾಯವೆದ್ದವರು ಸಿಂದಗಿಯವರು.
ಕೃಷಿ ಉತ್ಪನ್ನದ ದೊಡ್ಡ ಆದಾಯ, ಕಂದಾಯ, ಹೆಚ್ಚು ನೀರಾವರಿ ಹೊಂದಿರುವ ಕ್ಷೇತ್ರವಾಗಿರುವುದು ಸಿಂದಗಿ ತಾಲೂಕು. ಸಿಂದಗಿ, ಆಲಮೇಲ, ದೇವರಹಿಪ್ಪರಗಿ, ತಾಳಿಕೋಟಿ ತಾಲೂಕುಗಳಿಗೆ ಸೇರಿದ ಬಹುತೇಕ ಹಳ್ಳಿಗಳು ಮೂಲ ಸಿಂದಗಿ ತಾಲೂಕಿನಲ್ಲಿದ್ದು, ಎಲ್ಲ ಹಿನ್ನೆಲೆಗಳನ್ನು ಪರಿಶೀಲಿಸಿದರೆ ಸಿಂದಗಿ ಒಂದು ಜಿಲ್ಲಾ ಕೇಂದ್ರವಾಗಿ ನಿಲ್ಲುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಅಶೋಕ ವಾರದ, ಎಂ.ಎನ್.ಪಾಟೀಲ, ಅಶೋಕ ಅಲ್ಲಾಪೂರ, ಆನಂದ ಶಾಬಾದಿ, ಪ್ರಕಾಶ ಹಿರೇಕುರುಬರ, ಗುರು ತಳವಾರ, ಸಿದ್ದಲಿಂಗಯ್ಯ ಹಿರೇಮಠ, ಸಾಯಬಣ್ಣ ದೇವರಮನಿ ಇದ್ದರು.
“ವಿಜಯಪುರ ಜಿಲ್ಲೆಯನ್ನು ವಿಭಜಿಸುವುದಾರೆ ಜಿಲ್ಲಾ ಕೇಂದ್ರಕ್ಕೆ ಎಲ್ಲ ಅರ್ಹತೆಯುಳ್ಳ ಲಕ್ಷಣಗಳು ಸಿಂದಗಿ ಹೊಂದಿದ್ದು, ಸಿಂದಗಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡುವಲ್ಲಿ ಸರಕಾರ ಕ್ರಮಕೈಗೊಳ್ಳಬೇಕು. ಸಿಂದಗಿ ಜಿಲ್ಲಾ ಕೇಂದ್ರವಾಗಲು ಅತ್ಯಂತ ಸೂಕ್ತ ಪ್ರದೇಶವಾಗಿದೆ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು.”
– ಅರುಣ ಶಹಾಪೂರ
ವಿಪ ಮಾಜಿ ಸದಸ್ಯರು

