ಹಿರೇಪಡಸಲಗಿ ಶಾಲೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳ ಬೇಟಿ- ಶೈಕ್ಷಣಿಕ ಚಟುವಟಿಕೆ ಪರಿಶೀಲನೆ | ಬದ್ದತೆಯಿಂದ ಗುಣಾತ್ಮಕ ಶಿಕ್ಷಣಕ್ಕೆ ಆದ್ಯತೆ ನೀಡಲು ಸಲಹೆ
ಉದಯರಶ್ಮಿ ದಿನಪತ್ರಿಕೆ
ಚಿಕ್ಕಪಡಸಲಗಿ: ಇಂದಿನ ಯುವಜನತೆಯಲ್ಲಿ ಕಲಿಕಾಸಕ್ತಿ ಕ್ಷೀಣಿಸುತ್ತಿದೆ.ಮೊಬೈಲ್ ಹಾವಳಿಯ ಸೆಳೆತದಲ್ಲಿ ಸಿಲುಕಿರುವ ಬಹುತೇಕ ಮಕ್ಕಳಿಂದ ಅದ್ಯಯನ ಪ್ರವೃತ್ತಿಗೆ ಇಂದು ನಿರಾಶಾದಾಯಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.ಜಾಲತಾಣದ ಅನಿಯಂತ್ರಿತ ಬಳಕೆ ವ್ಯಾಮೋಹದಿಂದ ಶೈಕ್ಷಣಿಕ ವ್ಯವಸ್ಥೆಗೆ ಮಾರಕವಾಗುತ್ತಲ್ಲಿದೆ. ಇದರಿಂದ ಶಾಲಾ ಮಕ್ಕಳನ್ನು ಉಳಿಸಿ ಓದು,ಪಠ್ಯಾಸಕ್ತಿ ಕಡೆಗೆ ಕೊಂಡೊಯ್ದು ಬೆಳೆಸಬೇಕಾಗಿದೆ. ಆ ನಿಟ್ಟಿನಲ್ಲಿ ಶಿಕ್ಷಕ ಸಮೂಹ ಕಾಳಜಿಯಿಂದ ಈ ವಿಷಕಾರಿ ವಾತಾವರಣದಲ್ಲಿ ದಾರಿ ತಪ್ಪುತ್ತಿರುವ ಭವಿಷ್ಯತ್ತಿನ ಪ್ರಜೆಗಳ ಮನವೊಲಿಸಿ ಶಿಕ್ಷಣದ ಅಭಿರುಚಿ ಒಲವು ಮೂಡಿಸಲು ಮುಂದಾಗಬೇಕಾಗಿರುವುದು ತೀರಾ ಅಗತ್ಯವಾಗಿದೆ ಎಂದು ಜಮಖಂಡಿ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಬಸಣ್ಣವರ ಅಭಿಪ್ರಾಯಿಸಿದರು.
ಸಮೀಪದ ಹಿರೇಪಡಸಲಗಿ ಸರಕಾರಿ ಪ್ರೌಢಶಾಲೆಗೆ ಅನಿರೀಕ್ಷಿತ ಬೇಟಿ ನೀಡಿದ ಅವರು ಶಾಲಾ ಶೈಕ್ಷಣಿಕ ವಾತಾವರಣ ಹಾಗೂ ಎಸ್ಸೆಸ್ಸೆಲ್ಸಿ ಮಕ್ಕಳ ಅಭ್ಯಾಸದ ಗುಣಮಟ್ಟ ಪರಿಶೀಲಿಸಿದರು.
ಈ ವೇಳೆ ನಡೆಸಿದ ಶಿಕ್ಷಕ ಸಭೆಯಲ್ಲಿ ಮಾತನಾಡಿದ ಅವರು, ವಿಶೇಷವಾಗಿ ಎಸ್ಸೆಸ್ಸೆಲ್ಸಿ ಮಕ್ಕಳ ಬಗ್ಗೆ ಶಿಕ್ಷಕರು ಗಮನ ಹರಿಸಿ ಪಾಠ ಬೋಧನೆ ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದರು.
ಉತ್ತಮ ಫಲಿತಾಂಶಕ್ಕಾಗಿ ಈಗಿಂದಲೇ ಸಾಕಷ್ಟು ತಯಾರಿ ಮಾಡಿಕೊಳ್ಳಬೇಕು.ಆ ಹಿನ್ನೆಲೆಯಲ್ಲಿ ಉತ್ಕಟ, ಸರಳೀಕೃತ ಬೋಧನಾ ಕೈಂಕರ್ಯ ಮಕ್ಕಳ ಹೃದಯ ತಟ್ಟುವಂತೆ ನೋಡಿಕೊಳ್ಳಲು ಮುಂದಾಗಬೇಕಲ್ಲದೇ, ವಿದ್ಯಾರ್ಥಿಗಳು ಪರೀಕ್ಷೆಗೆ ಭಯ ತೋರೆದು ಆತ್ಮ ಸ್ಕೈರ್ಯದಿಂದ ಎದುರಿಸುವಂತೆ ಸನ್ನದ್ಧಗೊಳಿಸಬೇಕು ಎಂದು ಶಿಕ್ಷಕರಿಗೆ ಸಲಹೆ ನೀಡಿದರು.
ಶೈಕ್ಷಣಿಕ ಅಸ್ತಿತ್ವವನ್ನು ಗಟ್ಟಿಗೊಳಿಸಿದರೆ ಮಾತ್ರ ಮಕ್ಕಳಲ್ಲಿ ಓದು, ಬರಹದ ಪ್ರಗತಿ ಕಾಣಬಹುದು. ವಿದ್ಯಾರ್ಥಿಗಳ ಭವಿಷ್ಯ ಶಾಲಾ ಕೇಂದ್ರಗಳ ಕಲಿಕಾ ಕೊಠಡಿಗಳಲ್ಲಿ ಹುದುಗಿದೆ.ಆ ಕಾರಣ ಸಾಮಾಜಿಕ ಹೊಣೆಗಾರಿಕೆಯ ಪ್ರಭಾವ ಶಿಕ್ಷಕರು ತೋರಿ ಶಿಕ್ಷಣದ ಆಸ್ತಿತ್ವ ಇನ್ನಷ್ಟು ಅಗಾಧಗೊಳಿಸಬೇಕು ಎಂದರು.
ನಿಮ್ಮದೇ ಕೌಶಲ್ಯ, ವಿಶೇಷ ಪಾಂಡಿತ್ಯ ನವತಂತ್ರಗಳೊಂದಿಗೆ ಪಾಠಪ್ರವಚನ ಗೈದು ಮಕ್ಕಳ ಮನಸ್ಸನ್ನು ಸೆಳೆಯಬೇಕು. ಕಲಿಕೆ ನವಿರಾಗಿ ಅರಳಿಸಬೇಕು. ಪ್ರತಿ ಪಾಠ ಮನದಟ್ಟಾಗುವಂತೆ ಸಾಗಬೇಕು. ಮಕ್ಕಳ ಕಲಿಕಾ ಮನಸ್ಥಿತಿ ಜಾಗೃತವಾಗುವಂತೆ ಬೋಧನಾ ಚಟುವಟಿಕೆಗಳನ್ನು ನಡೆಸಿ ಕಲಿಕಾ ಚೈತನ್ಯ ಮೂಡಿಸಬೇಕು.ಈ ರೀತಿಯ ಕಾಯಕದಿಂದ ಮಕ್ಕಳ ಶೈಕ್ಷಣಿಕ ರಂಗದಲ್ಲಿ ಬದಲಾವಣೆಗಳನ್ನು ತಂದು ಕಲಿಕಾಸಕ್ತಿ ಅವಕಾಶ ತೆರೆದಿಡಬೇಕು ಎಂದು ಶಿಕ್ಷಕ ಸಮೂಹಕ್ಕೆ ಸಲಹೆ ನೀಡಿದರು.
ಕಲಿಕಾ ನಿರಾಸಕ್ತಿಯ ಖಿನ್ನತೆ ಭಾವ ತಾಳಿರುವ ಮಕ್ಕಳನ್ನು ಪ್ರೀತಿ, ವಿಶ್ವಾಸದಿಂದ ಕಂಡು ಅವರಲ್ಲಿ ಕಲಿಕಾ ಪುನಶತನಗೊಳಿಸುವುದು ಇಂದಿನ ಅತ್ಯಗತ್ಯ ಕೆಲಸವಾಗಿದೆ. ಮಕ್ಕಳ ಅಂತರಾಳದ ಅಳಕ್ಕೆ ಇಳಿದು ಅವರ ಭಾವನೆಗಳ ಮೇಲೆ ಹಿಡಿತ ಸಾಧಿಸಿದಾಗ ಸ್ವಯಂ ಶಿಕ್ಷಣದ ಅರಿವಿನ ಬಾಗಿಲು ತೆರೆದುಕೊಳ್ಳುತ್ತದೆ ಎಂದು ಬಿಇಒ ಅಶೋಕ ಬಸಣ್ಣವರ ಅಭಿಪ್ರಾಯಿಸಿದರು.
ಪಾಲಕ-ಪೋಷಕರು ಸಹ ತಮ್ಮ ನೈತಿಕ ಮೌಲ್ಯಗಳನ್ನು ಅರಿತು ಮಕ್ಕಳ ಶಿಕ್ಷಣದ ಬಗ್ಗೆ ಶಿಕ್ಷಕರ ಜೊತೆ ಹಾಗೂ ಇಲಾಖೆಯೊಂದಿಗೆ ಕೈಜೋಡಿಸಬೇಕು. ಮಕ್ಕಳ ಶಿಕ್ಷಣಕ್ಕೆ ಎಲ್ಲರೂ ದಿಕ್ಸೂಚಿಯಾಗಿ ನಿಲ್ಲಬೇಕು. ಆದ್ಯತೆ, ಬದ್ದತೆಯಿಂದ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶ್ರಮಿಸಬೇಕು ಎಂದರು.
ಈ ವೇಳೆ ಇಸಿಓ ಎಂ.ಎಸ್. ಚವ್ಹಾಣ, ವಲಯ ಸಿ ಆರ್ ಪಿ ಆರ್.ಎಚ್. ಮುದ್ನೂರ, ಗಣಿತ ಹಾಗೂ ಇಂಗ್ಲೀಷ್ ಸಂಪನ್ಮೂಲ ವ್ಯಕ್ತಿಗಳಾದ ಉಟಗಿ ಮತ್ತು ಝಂಭುರೆ ಸೇರಿದಂತೆ ಶಾಲೆಯ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಸಿಬ್ಬಂದಿಗಳಿದ್ದರು.