ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಕಳೆದ ಶೈಕ್ಷಣಿಕ ವರ್ಷದ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ವಿಜಯಪುರ ಜಿಲ್ಲೆಯೂ ಕುಸಿತ ಕಂಡಿದ್ದು ಈ ವರ್ಷ ಆರಂಭದಿಂದಲೇ ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆಗೆ ಅಧಿಕಾರಿ ವರ್ಗ, ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಕಾರ್ಯಪ್ರವೃತರಾಗಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಸಹನಿರ್ದೇಶಕಿ ಮತ್ತು ಶಿಕ್ಷಕರ ಸರಕಾರಿ ಶಿಕ್ಷಣ ಮಹಾವಿದ್ಯಾಲಯ ಜಮಖಂಡಿಯ ಪ್ರಾಚಾರ್ಯ ಮಂಗಲಾ ನಾಯಕ ಹೇಳಿದರು.
ತಾಲ್ಲೂಕಿನ ಇಟ್ಟಂಗಿಹಾಳದ ವೇದ ಅಕಾಡೆಮಿ ಶಿಕ್ಷಣ ಸಂಸ್ಥೆಯಲ್ಲಿ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಹಯೋಗದಲ್ಲಿ ಶನಿವಾರ ನಡೆದ ಎಸ್ಎಸ್ಎಲ್ಸಿ ಮಕ್ಕಳ ಫಲಿತಾಂಶ ಸುಧಾರಣೆಗೆ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಮುಖ್ಯೋಪಾಧ್ಯಾಯ ಸಭೆಯಲ್ಲಿ ಅವರು ಮಾತನಾಡಿದರು.
ನಕಲು ಮುಕ್ತ ಪರೀಕ್ಷೆ ನಡೆಯುವದರೊಂದಿಗೆ ಜಿಲ್ಲೆಯೂ
ಟಾಪ್ ಹತ್ತರಲ್ಲಿ ಫಲಿತಾಂಶ ಬರಬೇಕು. ಕಠಿಣ ವಿಷಯಗಳ ಕುರಿತು ವಿಶೇಷ ತರಗತಿಗಳನ್ನು ಶೈಕ್ಷಣಿಕ ವರ್ಷ ಆರಂಭದಿಂದಲೇ ಆರಂಭಿಸಬೇಕು. ಅಂದಿನ ಪಾಠದ ಕಠಿಣತೆ ಕುರಿತು ಅಂದೇ ವಿಶೇಷ ತರಗತಿ ನಡೆಸುವದರ ಮೂಲಕ ಹೇಳುವದು. ಶಾಲೆಯ ಚುಕ್ಕಾಣಿ ಹಿಡಿದಿರುವ ಮತ್ತು ಅನುಷ್ಠಾನ ಅಧಿಕಾರಿಗಳಾದ ಮುಖ್ಯೋಪಾಧ್ಯಾಯರು ಚಾಚು ತಪ್ಪದೇ ಪಾಲಿಸಬೇಕು. ಮೊದಲು ನಾವು ಕೆಲಸ ಮಾಡಬೇಕು ನಂತರ ಮೇಲ್ವಿಚಾರಣೆ ಮಾಡಬೇಕು, ಎಪ್ಎಲ್ಎನ್ ಸಾಧಿಸದೆ ಇರುವ ಮಕ್ಕಳಿಗೆ ಅಜಿಂ ಪ್ರೇಮಜಿ ಪೌಂಡೇಶನ್ ವತಿಯಿಂದ ರಚಿಸಿದ ಗಣಿತ ಮತ್ತು ಕನ್ನಡ ಪುಸ್ತಕಗಳ ಕಲಿಕಾ ಸಾಧನವನ್ನು ಶಾಲೆಯಲ್ಲಿ ಬಳಸಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು. ಶಾಲೆಯಲ್ಲಿ ಎಲ್ಲ ಶಿಕ್ಷಕರಿಗೆ ಮೇಲಿಂದ ಮೇಲೆ ಇಪ್ಪತ್ತು ಅಂಶಗಳ ಚಟುವಟಿಕೆಗಳ ಕುರಿತು ಸಭೆಗಳನ್ನು ಮಾಡುವದರ ಮೂಲಕ ಮೇಲ್ವಿಚಾರಣೆ ಮಾಡಿ ಕಲಿಕಾ ವಾತಾವರಣ ನಿರ್ಮಿಸಬೇಕು ಎಂದರು.
ಡಿಡಿಪಿಐ (ಅಭಿವೃದ್ದಿ) ಉಮಾದೇವಿ ಸೊನ್ನದ ಮಾತನಾಡಿ, ನಮ್ಮೆಲ್ಲರಿಗೂ ಇಲಾಖೆಯ ಆದೇಶಗಳನ್ನು, ನಿರ್ದೇಶನಗಳನ್ನು ಹೇಳುವುದೆಲ್ಲ ಮುಗಿದಿದೆ ಇವೆಲ್ಲವುಗಳನ್ನು ಮುಖ್ಯೋಪಾಧ್ಯಾಯರು ಶಾಲೆಯಲ್ಲಿ ಅನುಷ್ಠಾನವನ್ನು ಈ ವರ್ಷ ಪರಿಣಾಮಕಾರಿಯಾಗಿ ಮಾಡಬೇಕು. ನಮ್ಮ ಡಯಟ್ ವತಿಯಿಂದ ಪ್ರಶ್ನೆ ಪತ್ರಿಕೆ ರಚನೆ, ದತ್ತು ಶಾಲೆ ಅನುಷ್ಠಾನ, ತರಬೇತಿಗಳನ್ನು ಹಮ್ಮಿಕೊಂಡು ಫಲಿತಾಂಶ ಸುಧಾರಣೆ ಮಾಡೋಣ ಎಂದು ಹೇಳಿದರು.
ಡಿಡಿಪಿಐ (ಆಡಳಿತ) ಟಿ.ಎಸ್. ಕೋಲಾರ ಮಾತನಾಡಿ ವಿಷಯವಾರು ಕಠಿಣ ಅಂಶಗಳ ಪಟ್ಟಿ ಮಾಡಿಕೊಂಡು ಮಕ್ಕಳಿಗೆ ಹೆಚ್ಚು ಒತ್ತು ಕೊಟ್ಟು ಅರ್ಥೈಸಿ ಫಲಿತಾಂಶ ಸುಧಾರಣೆಗೆ ಕ್ರಮವಹಿಸಬೇಕು ಎಂದರು.
ಬಿಇಓ ಪಿ. ಎಸ್. ಬಳೋಲಮಟ್ಟಿ ಮಾತನಾಡಿ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗೆ ಶಾಲೆಯಲ್ಲಿ ಮಕ್ಕಳಿಗೆ ವಿಶೇಷ ತರಗತಿ, ರಸಪ್ರಶ್ನೆ, ಗುಂಪು ಚರ್ಚೆ, ಕಲಿಕೆಯಲ್ಲಿ ಹಿಂದೂಳಿದ ಮಕ್ಕಳಿಗೆ ಎಪ್ಎಲ್ಎನ್ ಸಾಧಿಸದ ಮಕ್ಕಳಿಗೆ ವಿಶೇಷ ಚಟುವಟಿಕೆ, ಘಟಕ ಪರೀಕ್ಷೆಕ ತೆಗೆದುಕೊಂಡು ದಾಖಲೀಕರಣ ಮಾಡುವದು ಕಡ್ಡಾಯ, ದತ್ತು ಮಕ್ಕಳನ್ನು ಪಡೆದು ಅವರಿಗೆ ಚಟುವಟಿಕೆ ಕೊಡುವದು, ಮಕ್ಕಳಿಗೆ ಆಟಗಳನ್ನು ಆಡಿಸಿ ಹುರುದುಂಬಿಸಿ ಮಕ್ಕಳು ಓದುವಂತೆ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಉಪನ್ಯಾಸಕ ನಾರಾಯಣ ಬಾಬಾನಗರ, ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಡಿ. ಮೋಸಲಗಿ, ಮುಖ್ಯೋಪಾಧ್ಯಾಯ ಮಾಧವಪ್ರಸಾದ ಕುಲಕರ್ಣಿ, ಇಲಾಖೆಯ ಎಲ್ಲ ಇಸಿಓ, ಬಿಆರ್ಪಿ, ಸಿಆರ್ಪಿ, ಮುಖ್ಯಗುರುಗಳು ಇದ್ದರು.
ನಿರೂಪಣೆಯನ್ನು ಪ್ರಭು ಬಿರಾದಾರ, ಸ್ವಾಗತವನ್ನು ವಸಂತ ಚವ್ಹಾಣ, ವಂದನಾರ್ಪಣೆಯನ್ನು ಜಿ.ಟಿ.ಕಾಗವಾಡ ನೆರವೇರಿಸಿದರು.