ನಿಕಟಪೂರ್ವ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರಿಗೆ ಆತ್ಮೀಯ ಬೀಳ್ಗೊಡುಗೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ಶುಕ್ರವಾರ ನಿಕಟಪೂರ್ವ ಜಿಲ್ಲಾಧಿಕಾರಿಗಳಿಗೆ ಬೀಳ್ಕೊಡುಗೆ ಹಾಗೂ ನೂತನ ಜಿಲ್ಲಾಧಿಕಾರಿಗಳಿಗೆ ಸ್ವಾಗತ ಕಾರ್ಯಕ್ರಮ ಜರುಗಿತು.
ಜಿಲ್ಲಾಡಳಿತದಿಂದ ವತಿಯಿಂದ ಬೀಳ್ಕೊಡುಗೆ ಹಾಗೂ ಸ್ವಾಗತ ಸಮಾರಂಭ ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲಾಧಿಕಾರಿಗಳಾಗಿ ಕಾರ್ಯನಿರ್ವಹಿಸಿ ವರ್ಗಾವಣೆಗೊಂಡಿರುವ ನಿಕಟಪೂರ್ವ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರನ್ನು ಕುಟುಂಬ ಸದಸ್ಯರೊಂದಿಗೆ ಸನ್ಮಾನಿಸಿ ಆತ್ಮೀಯವಾಗಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ವಿವಿಧ ಅಧಿಕಾರಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸೇರಿದಂತೆ ಹಲವರು ಮಾತನಾಡಿ, ತಮ್ಮ ಸೇವಾವಧಿಯಲ್ಲಿ ಜಿಲ್ಲೆಯಲ್ಲಿ ಕೈಗೊಂಡಿರುವ ಅಭಿವೃದ್ದಿ ಕಾರ್ಯಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಎಲ್ಲರೊಂದಿಗೆ ಪ್ರೀತಿ-ವಿಶ್ವಾಸದೊಂದಿಗೆ ಬೆರೆತು ಜನರ ಮನಸ್ಸನ್ನು ಗೆದ್ದಂತಹ ಜಿಲ್ಲಾಧಿಕಾರಿಗಳ ಕಾರ್ಯವೈಖರಿ ಇತರರಿರೂ ಮಾದರಿಯಾಗಿದೆ ಎಂದು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ವಿಜಯಪುರದಿಂದ ವರ್ಗಾವಣೆಗೊಂಡಿರುವ ನಿಕಟಪೂರ್ವ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಮಾತನಾಡಿ, ನನ್ನ ಎರಡು ವರ್ಷಗಳವರೆಗೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ ಅನುಭವ ನನ್ನ ಮನಸ್ಸಿನಲ್ಲಿಯೇ ಅಚ್ಚಳಿಯದೇ ಉಳಿಯುವಂತೆ ಮಾಡಿದೆ. ಜಿಲ್ಲೆಯ ನೆನಪುಗಳು ಜೀವನದುದ್ದಕ್ಕೂ ನನ್ನ ಜೊತೆಗಿರಲಿವೆ. ಇಲ್ಲಿನ ಜನರು ವಿಶಾಲ ಹೃದಯವುಳ್ಳವರು, ಅವರು ನೀಡಿರುವ ಪ್ರೀತಿ-ವಿಶ್ವಾಸ, ಸಹಕಾರವನ್ನು ಎಂದಿಗೂ ಮರೆಯಲಾಗದ ಸಂಗತಿಯಾಗಿದೆ ಎಂದು ಅವರು ಹೇಳಿದರು.
ಈ ವಿಭಜಿತ ಜಿಲ್ಲೆಗಳಲ್ಲಿ ಸಲ್ಲಿಸಿದ ಸೇವೆ ನನಗೆ ತೃಪ್ತಿ ತಂದಿದೆ. ಈ ಅವಧಿಯಲ್ಲಿ ನಾನು ಬೇರೆ ರಾಜ್ಯದವನು ಎಂಬ ಭಾವನೆ ಬರದ ಹಾಗೆ ನೋಡಿಕೊಂಡು,ನನ್ನನ್ನು ತಮ್ಮ ಮನೆ-ಮಗನೆಂದು ಭಾವಿಸಿ ನನಗೆ ನೀಡಿರುವ ಪ್ರೀತಿ-ವಿಶ್ವಾಸಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.
ನೂತನ ಜಿಲ್ಲಾಧಿಕಾರಿ ಡಾ.ಆನಂದ ಕೆ. ಮಾತನಾಡಿ, ಹಿಂದಿನ ಜಿಲ್ಲಾಧಿಕಾರಿಗಳು ನಡೆಸಿಕೊಂಡ ಬಂದ ಕಾರ್ಯಗಳೊಂದಿಗೆ ಜಿಲ್ಲೆಯ ಅಭಿವೃದ್ದಿಗೆ ಪೂರಕವಾಗಿ, ಜನರ ಆಶೋತ್ತರಗಳಿಗುಣವಾಗಿ ಶ್ರಮಿಸುವುದಾಗಿ ತಿಳಿಸಿದ ಅವರು, ಇಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಸಂಘ ಸಂಸ್ಥೆಯ ಪದಾಧಿಕಾರಿಗಳು ತಮ್ಮ ಅನಿಸಿಕೆ ಹಂಚಿಕೊಂಡ ವಿಷಯಗಳಿಂದ ಜಿಲ್ಲೆಯ ಸಮಗ್ರ ಚಿತ್ರಣವೂ ಸಹ ತಿಳಿದುಕೊಳ್ಳಲು ಸಾದ್ಯವಾಯಿತು. ಈ ಅನಿಸಿಕೆಗಳಿಂದ ನಿಕಟ ಪೂರ್ವ ಜಿಲ್ಲಾಧಿಕಾರಿಗಳು ಜನಸಾಮಾನ್ಯರ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸಿರುವ ಕುರಿತು ಮನನವಾಗಿದೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಸ್ವಾಗತಿಸಿದರು.
ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸೀಂಪೀರ್ ವಾಲಿಕಾರ, ರೈತ ಮುಖಂಡ ಅರವಿಂದ ಕುಲಕರ್ಣಿ, ರಾಜ್ಯೋತ್ಸವ ಪ್ರಶಸ್ತಿ ಪುರಷ್ಕೃತ ಡಾ. ಎಲ್.ಎಚ್.ಬಿದರಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಿ, ರೈತಪರ ಸಂಘಟನೆ, ವಿವಿಧ ಸಂಘಟನೆಯವರು ಸನ್ಮಾನ ಮಾಡಿ, ತಮ್ಮ ಪ್ರೀತಿಯ ಸನ್ಮಾನ ಸಲ್ಲಿಸಿದರು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಾಜಶೇಖರ ಡಂಬಳ, ಜಿಲ್ಲಾ ಶಸ್ತ್ರ ಚಿಕಿತ್ಸಕ ಶಿವಾನಂದ ಮಾಸ್ತಿಹೊಳಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬದ್ರುದ್ದಿನ್ ಸೌದಾಗರ್, ಇಂಡಿ ತಹಶೀಲ್ದಾರ ಬಿ.ಎಸ್ ಕಡಕ್‌ಭಾವಿ, ವಿಜಯಪುರ ತಹಶೀಲ್ದಾರ ಪ್ರಶಾಂತ ಚನಗೊಂಡ, ಅಭಿಷೇಕ ಚಕ್ರವರ್ತಿ ಸೇರಿದಂತೆ ಇತರರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
“ಗ್ರಾಮೀಣ ಹಾಗೂ ನಗರಾಭಿವೃದ್ಧಿ ಇಲಾಖೆಗಳಲ್ಲಿ ಅನುಭವ ಹೊಂದಿದ ನಿಕಟಪೂರ್ವ ಜಿಲ್ಲಾಧಿಕಾರಿಗಳೊಂದಿಗೆ ಕಾರ್ಯನಿರ್ವಹಿಸುವುದರಿಂದ ಹೆಚ್ಚಿನ ಮಾರ್ಗದರ್ಶನ ಪಡೆದುಕೊಳ್ಳಲು ಸಾಧ್ಯವಾಗಿದೆ. ಜಿಲ್ಲೆಯಲ್ಲಿ ಆರೋಗ್ಯ, ಶಿಕ್ಷಣ ಕ್ಷೇತ್ರ ಸೇರಿದಂತೆ ವಿವಿಧ ಅಭಿವೃದ್ದಿ ಕಾರ್ಯಗಳು ಮಾದರಿಯಾಗಿವೆ. ವಿವಿಧ ಇಲಾಖೆಗಳಲ್ಲಿನ ಸೌಲಭ್ಯಗಳನ್ನು ಸಾರ್ವಜನಿಕರಿಗೆ ದೊರಕಬೇಕೆಂಬ ಮಹದಾಸೆ ಹೊಂದಿದ ಇವರು, ಮಾತೃಹೃದಯದ ಜಿಲ್ಲಾಧಿಕಾರಿಗಳಾಗಿ, ನನಗೆ ಸಹೋದರ ಹಾಗೂ ಮಾರ್ಗದರ್ಶಕರಾಗಿದ್ದರು.”
– ರಿಷಿ ಆನಂದ
ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ