ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಇಂದಿನ ಸ್ಪರ್ಧಾತ್ಮಕ ಪರೀಕ್ಷೆಗಳ ಯಶಸ್ವಿಗೆ ಕೇವಲ ಶ್ರೀಮಂತಿಕೆಯ ನೆಲೆಗಟ್ಟು ಮುಖ್ಯವಾದುದಲ್ಲ. ಸ್ಪರ್ಧಾ ಮನೋಬಾವ, ಇಚ್ಚಾಶಕ್ತಿ ಮತ್ತು ಸತತ ಪ್ರಯತ್ನಗಳೇ ಮುಖ್ಯ ಎಂದು ಸಹಾಯಕ ಕಮಾಂಡರ ಅನೀಲ ಚವ್ಹಾಣ ಹೇಳಿದರು.
ತಾಲ್ಲೂಕಿನ ಭೈರವಾಡಗಿ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಜರುಗಿದ ೨೦೨೫-೨೬ನೇ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಬಡತನ ಮತು ಗ್ರಾಮೀಣ ಹಿನ್ನೆಲೆ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಎಂದಿಗೂ ಅಡ್ಡಿಯಾಗದು. ಅಧ್ಯಯನದ ಸೂಕ್ತರೀತಿ, ಬೌದ್ಧಿಕ ಸಾಮಗ್ರಿ ಮತ್ತು ಸರಿಯಾದ ಮಾರ್ಗದರ್ಶನದಿಂದ ಕೇಂದ್ರ ಹಾಗೂ ರಾಜ್ಯಗಳ ಲೋಕಸೇವಾ ಆಯೋಗ, ಉಳಿದ ನೇಮಕಾತಿ ಪ್ರಾಧಿಕಾರಗಳ ಸ್ಪರ್ದಾತ್ಮಕ ಪರೀಕ್ಷೆಗಳಲ್ಲಿ ಯಶಸ್ವ್ವಿಯಾಗಬಹುದು. ವಿದ್ಯಾರ್ಥಿಗಳು ಭವಿಷ್ಯದ ಸ್ಪರ್ಧಾತ್ಮಕ ಪರೀಕ್ಷೆಯ ಕನಸು ಮತ್ತು ಸಿದ್ಧತೆಯನ್ನು ವಿದ್ಯಾರ್ಥಿ ದೆಸೆೆಯಲ್ಲಿಯೇ ಬೆಳೆಸಿಕೊಳ್ಳಬೆಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಪ್ರಾಚಾರ್ಯ ಪ್ರಭುಗೌಡ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿ ಶೈಕ್ಷಣಿಕ ಪರೀಕ್ಷೆಗಳ ಜೊತೆಗೆ ಸ್ಪರ್ದಾತ್ಮಕ ಪರೀಕ್ಷೆಗಳ ಬಗ್ಗೆ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳಬೇಕು. ರಾಜ್ಯ ಮತ್ತು ರಾಷ್ಟçಮಟ್ಟದ ಪ್ರತಿಷ್ಟಿತ ಪರೀಕ್ಷೆಗಳ ಬಗ್ಗೆ ಈಗ ಹೆಚ್ಚಿನ ಜಾಗೃತಿ ಮೂಡಿದೆ. ಅವುಗಳಿಗೆ ಆಕರ್ಷಿತರಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಬಹಳ ಆಸಕ್ತಿ ಹೊಂದುತ್ತಿರುವದು ಸಕಾರಾತ್ಮಕ ಬೆಳವಣಿಗೆ. ಇದಕ್ಕೆ ಬೆಳಗಾವಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸಹಾಯಕ ಕಮಾಂಡರ್ ಅವರೇ ಸಾಕ್ಷಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಸ್ವಾಗತಿಸಿ ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯಕ್ರಮಗಳ ಉದ್ಗಾಟನೆ ನೆರವೇರಿಸಲಾಯಿತು.
ಉಪನ್ಯಾಸಕಿ ಸವಿತ ಬಿ.ಜೆ., ಲಾಲು.ಚವ್ಹಾಣ, ಎಂ.ಎಸ್.ಕೋಲಾರ ಹಾಗೂ ಕಾಲೇಜು, ಪ್ರೌಢಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇದ್ದರು.