ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪ್ರಸ್ತುತ ಕೃಷಿ ಬಿಕ್ಕುಟ್ಟುಗಳ ಜೊತೆ ಭವಿಷ್ಯದಲ್ಲಿ ತುಂಡು ಕೃಷಿ ತಂದೊಡ್ಡಬಹುದಾದ ಸಮಸ್ಯೆಗಳನ್ನು ಮೆಟ್ಟಿ ನಿಂತು ರೈತರ ಬದುಕಲ್ಲಿ ಆಶಾದಾಯಕ ಭರವಸೆ ಮೂಡಿಸಲು ಸಮುದಾಯ ಕೃಷಿಯಿಂದ ಮಾತ್ರ ಸಾಧ್ಯವೆಂಬುದನ್ನು ನಿರೂಪಿಸಲು ಹುಟ್ಟಿ ಬಂದ ರೈತ ಉತ್ಪಾದಕ ಕಂಪನಿಯ ಕಲ್ಪನೆಗೆ ದಾಸೋಹಿ ಹೊಸ ಭಾಷ್ಯೆ ಬರೆದಿದೆ ಎಂದು ಹಿರೇಮುರಾಳದ ಶ್ರೀ ಸಂಗಮೇಶ್ವರ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಬಿ.ವಿ ಭೋವಿ ಹೇಳಿದರು.
ಪಟ್ಟಣದ ಎ.ಪಿ.ಎಂ.ಸಿ ಆವರಣದಲ್ಲಿರುವ ದಾಸೋಹಿ ರೈತ ಉತ್ಪಾದಕ ಕಂಪನಿಯ ದಾಸ್ತಾನು ಮಳಿಗೆ ಆವರಣದಲ್ಲಿ ಏರ್ಪಡಿಸಲಾಗಿದ್ದ ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿಯ ಪ್ರಥಮ ಸಂಸ್ಥಾಪನಾ ದಿನಾಚರಣೆ ಹಾಗೂ ದಾಸ್ತಾನು ಮಳಿಗೆಯ ಪೂಜಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸದಸ್ಯ ರೈತರೇ ಮಾಲೀಕರೆಂದು ಪ್ರತಿಪಾದಿಸಿ ಒಂದೇ ವರ್ಷದಲ್ಲಿ ದಾಸೋಹಿ ಎಂಬ ಸೂರಿನಡಿ ರೈತರ ಅಗತ್ಯತೆಯನ್ನು ಪೂರೈಸಲು ಹಲವು ಸೇವೆಗಳನ್ನು ಆರಂಭಿಸಿ ಯಶಸ್ವಿಯಾಗಿ ಮುನ್ನೆಡೆಸುತ್ತಿರುವುದು ಶ್ಲಾಘನೀಯವೆಂದರು.
ಮುಖ್ಯ ಅತಿಥಿಯಾಗಿದ್ದ ಎ.ಪಿ.ಎಂ.ಸಿ ಜಾಗೃತ ಕೋಶದ ನಿವೃತ್ತ ಅಧಿಕಾರಿ ಜಿ.ಎಂ ಯಡವಣ್ಣವರ ಮಾತನಾಡಿ, ರೈತರನ್ನು ಸಂಘಟನೆ ಮಾಡಿ ಸಾಮೂಹಿಕ ಕೃಷಿ ಪರಿಕಲ್ಪನೆಯ ಸೂರಿನಡಿ ಕೃಷಿ ವೆಚ್ಚವನ್ನು ತಗ್ಗಿಸಿ ಉತ್ಪಾದನೆ ಹೆಚ್ಚಿಸುವುದರ ಜೊತೆ ಕೃಷಿ ಹುಟ್ಟುವಳಿಗಳಿಗೆ ವೈಜ್ಞಾನಿಕ ಬೆಲೆ ಸಿಗಬೇಕೆಂಬ ಉದ್ದೇಶದಿಂದ ರೈತ ಮಾಲಿಕತ್ವದ ಕಂಪನಿಯೊಂದನ್ನು ಸ್ಥಾಪಿಸಿ ಈ ಭಾಗದ ರೈತರ ನೆರವಿಗೆ ಕಂಕಣ ಬದ್ಧರಾಗಿ ನಿಂತಿರುವ ಅರವಿಂದ ಕೊಪ್ಪರವರ ನೇತೃತ್ವದಲ್ಲಿ ಪರಸ್ಪರ ಸಹಾಯ ಮತ್ತು ಸಹಕಾರದಿಂದ ಮುನ್ನೆಡೆದು ಅಭಿವೃದ್ಧಿ ಸಾಧಿಸೋಣವೆಂದರು.
ನಿವೃತ್ತ ಉಪ ತಹಸೀಲ್ದಾರ ಆರ್. ಬಿ ಸಜ್ಜನ ಮಾತನಾಡಿ ಆರ್ಥಿಕ ಮುಗ್ಗಟ್ಟು, ಮಾಹಿತಿ ಕೊರತೆ, ವ್ಯವಸ್ಥಿತ ಶೋಷಣೆಗಳಿಂದಾಗಿ ಬೆಂಡಾಗುತ್ತಿರುವ ರೈತ ಸಮುದಾಯದಲ್ಲಿ ನೈತಿಕತೆಯನ್ನು ತುಂಬಿ ಸ್ವಾವಲಂಬಿ ಬದುಕು ಕಟ್ಟಿಕೊಡುವ ದಿಶೆಯಲ್ಲಿ ಪ್ರಬುದ್ಧ ಚಿಂತನೆ ಹಾಗೂ ವೃತ್ತಿಪರ ನೀಲನಕ್ಷೆಯೊಂದಿಗೆ ಅಸ್ತಿತ್ವಕ್ಕೆ ತರಲಾದ ದಾಸೋಹಿ ರೈತ ಉತ್ಪಾದಕ ಕಂಪನಿಯು ತನ್ನ ಸದಸ್ಯ ರೈತರ ಸಮಸ್ಯೆಗಳಿಗೆ ಧ್ವನಿಯಾಗುವ ಮೂಲಕ ಸುಸ್ಥಿರ ಬದುಕು ಕಟ್ಟಿಕೊಡಲು ನಡೆಸುತ್ತಿರುವ ಚಟುವಟಿಕೆಗಳು ರಾಜ್ಯಕ್ಕೆ ಮಾದರಿಯಾಗಿವೆ ಎಂದರು.
ನ್ಯಾಯವಾದಿ ರಶ್ಮಿ ಕೊಪ್ಪ ಮಾತನಾಡಿ ಸಾಂಪ್ರದಾಯಿಕವಾಗಿ ಬಿತ್ತಿ ಬೆಳೆಯುವ ರೈತನಿಗೆ ವ್ಯವಹಾರಿಕ ಕೌಶಲ್ಯಗಳನ್ನು ಹೇಳಿಕೊಟ್ಟು ವೃತ್ತಿಪರನನ್ನಾಗಿಸುವಲ್ಲಿ ರೈತ ಉತ್ಪಾದಕ ಕಂಪನಿಗಳ ಪಾತ್ರವನ್ನರಿತು ದಾಸೋಹಿ ಇಟ್ಟಿರುವ ಹೆಜ್ಜೆ ಭವಿಷ್ಯದಲ್ಲಿ ಈ ಭಾಗದ ರೈತರಿಗೆ ಹೆಚ್ಚಿನ ನೆರವು ಕಲ್ಪಿಸಲಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ದಾಸೋಹಿ ರೈತ ಉತ್ಪಾದಕ ಕಂಪನಿ ಸಂಸ್ಥಾಪಕ ಅರವಿಂದ ಕೊಪ್ಪ ಮಾತನಾಡಿ, ರೈತರಿಗೆ ಆರ್ಥಿಕ ಮತ್ತು ಸಾಮಾಜಿಕ ಭದ್ರತೆಯನ್ನು ಖಾತ್ರಿಪಡಿಸುವ ಉದ್ದೇಶದಿಂದ ರಚಿತವಾದ ಕಂಪನಿಯ ಬೆಳವಣಿಗೆಯಲ್ಲಿ ರೈತರ ಪಾಲ್ಗೊಳ್ಳುವಿಕೆ ಅತ್ಯವಶ್ಯ. ಸದಸ್ಯ ರೈತರ ಅವಶ್ಯಕತೆಗಳಿಗೆ ಪೂರಕ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ವೇದಿಕೆಯ ಮೇಲೆ ನಿವೃತ್ತ ಕೃಷಿ ಅಧಿಕಾರಿ ಕಲ್ಲಪ್ಪ ಈ.ದೊಡಮನಿ, ಪ್ರಗತಿಪರ ರೈತರಾದ ಬಸಲಿಂಗಪ್ಪ ರಕ್ಕಸಗಿ, ಸಿ.ಆರ್ ಬಿರಾದಾರ, ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿಯ ನಿರ್ದೇಶಕರಾದ ಕಲ್ಲಣ್ಣ ಪ್ಯಾಟಿ, ಸೋಮನಗೌಡ ಬಿರಾದಾರ, ಬಸವರಾಜ ಕುಂಟೋಜಿ, ಭೀಮಣ್ಣ ಮಳಗೌಡರ ಉಪಸ್ಥಿತರಿದ್ದರು.
ರವೀಂದ್ರ ರೂಡಗಿ ಸ್ವಾಗತಿಸಿದರು. ಪ್ರಭುಸ್ವಾಮಿ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ಗುಂಡಪ್ಪ ಬಿರಾದಾರ ವಂದಿಸಿದರು.

