ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪಟ್ಟಣದಲ್ಲಿ ಅಗ್ನಿಶಾಮಕ ಠಾಣೆ ಪ್ರಾರಂಭಕ್ಕೆ ನಿವೇಶನ ಮಂಜೂರು ಮಾಡುವಂತೆ ಕೋರಿ ಜಿಲ್ಲಾ ಅಗ್ನಿಶಾಮಕದಳ ಅಧಿಕಾರಿ ಶಶಿಧರ ನಿಲಗಾರ ತಹಶೀಲ್ದಾರ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ ಕಚೇರಿಗೆ ಬುಧವಾರ ಆಗಮಿಸಿದ ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಹಾಗೂ ಸಿಬ್ಬಂದಿ ತಹಶೀಲ್ದಾರರನ್ನು ಕಂಡು ನಿವೇಶನ ಮಂಜೂರ ಕುರಿತಂತೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಅಧಿಕಾರಿ ಶಶಿಧರ ಮಾತನಾಡಿ, ದೇವರಹಿಪ್ಪರಗಿ ತಾಲ್ಲೂಕು ಬೆಳವಣಿಗೆ ಹೊಂದುತ್ತಿದೆ. ಈಗ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕಬ್ಬು ಬೆಳೆಗೆ ಬೆಂಕಿ ಸೇರಿದಂತೆ ಇತರ ಕಾರಣಗಳಿಂದ ಅಗ್ನಿಕರೆಗಳು ಬರುತ್ತಿವೆ. ಹೀಗೆ ಕರೆಗಳು ಬಂದಾಗ ಪಕ್ಕದ ತಾಲ್ಲೂಕು ಕೇಂದ್ರಗಳಾದ ಸಿಂದಗಿ, ಬಸವನ ಬಾಗೇವಾಡಿ ಹಾಗೂ ಜಿಲ್ಲಾ ಕೇಂದ್ರ ವಿಜಯಪುರದಿಂದ ಅಗ್ನಿಶಾಮಕ ವಾಹನ ಆಗಮಿಸಿ ಬೆಂಕಿ ನಂದಿಸಬೇಕಾಗುತ್ತದೆ. ಇದಕ್ಕೆ ಸಾಕಷ್ಟು ಸಮಯ ವ್ಯರ್ಥವಾಗುವುದರಿಂದ ಸೇವೆ ತನ್ನ ಮಹತ್ವ ಕಳೆದುಕೊಳ್ಳುವ ಸಾಧ್ಯತೆಯಿರುತ್ತದೆ.
ಅಗ್ನಿಶಾಮಕ ದಳ ಸಾರ್ವಜನಿಕ ಸೇವಾ ನಿರತ ಪಡೆ ಹಾಗೂ ಇಲಾಖೆಯಾಗಿದ್ದು, ನೈಸರ್ಗಿಕ ವಿಕೋಪ ಹಾಗೂ ಮಾನವ ನಿರ್ಮಿತ ವಿಪತ್ತುಗಳಲ್ಲಿ ಸಾರ್ವಜನಿಕ ಪ್ರಾಣರಕ್ಷಣೆ ಹಾಗೂ ಆಸ್ತಿ ಸಂರಕ್ಷಿಸುವ ಮಹತ್ವದ ಹಾಗೂ ಗುರುತರ ಜವಾಬ್ದಾರಿ ನಿರ್ವಹಿಸುವುದರಿಂದ ಇಲಾಖೆಗೆ ಅನುಕೂಲವಾಗುವಂತೆ ರಸ್ತೆಗೆ ಹೊಂದಿಕೊಂಡಿರುವ ೦೨ ಎಕರೆ ಜಮೀನು ಮಂಜೂರು ಮಾಡಲು ವಿನಂತಿಸಿದರು.
ಮನವಿಗೆ ಸ್ಪಂದಿಸಿದ ತಹಶೀಲ್ದಾರ ಪ್ರಕಾಶ ಸಿಂದಗಿ ಕೂಡಲೇ ಕ್ರಮ ಕೈಗೊಂಡು ವಿಜಯಪುರ ರಸ್ತೆಯಲ್ಲಿ ೨ ಎಕರೆ ಜಮೀನು ಮಂಜೂರು ಮಾಡುವ ಭರವಸೆ ನೀಡಿದರು.
ಪ್ರಮುಖ ಅಗ್ನಿಶಾಮಕ ಪ್ರಭು ಸಣ್ಣಕ್ಕಿ, ಸಿದ್ದೇಶ ರಾಠೋಡ, ಸೋಮು ದೇವೂರ, ಹಣಮಂತ ಹೀರಾಪೂರ ಸೇರಿದಂತೆ ಇತರರು ಇದ್ದರು.

