ಜ್ಞಾನ ಯೋಗಾಶ್ರಮದಲ್ಲಿ ಗುರುಪೂರ್ಣಿಮಾ ಮಹೋತ್ಸವ | ಮೊದಲ ದಿನವೇ 600ಕ್ಕೂ ಹೆಚ್ಚು ಭಕ್ತರಿಗೆ ತಪಾಸಣೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಜ್ಞಾನ ಯೋಗಾಶ್ರಮದಲ್ಲಿ ಗುರುಪೂರ್ಣಿಮಾ ಮಹೋತ್ಸವ ಅಂಗವಾಗಿ ನಗರ ಶಾಸಕರು ಹಾಗೂ ಸಿದ್ದೇಶ್ವರ ಸಂಸ್ಥೆ ಅಧ್ಯಕ್ಷರಾದ ಬಸನಗೌಡ ಪಾಟೀಲ ಯತ್ನಾಳ ರವರ ಅಧ್ಯಕ್ಷತೆಯ ಶ್ರೀ ಸಿದ್ದೇಶ್ವರ ಸೂಪರ್ ಸ್ಪೇಶಾಲಿಟಿ ಆಸ್ಪತ್ರೆ (ಜೆ.ಎಸ್.ಎಸ್) ವತಿಯಿಂದ ಆಯೋಜಿಸಲಾದ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಬುಧವಾರ ಜ್ಞಾನಯೋಗಾಶ್ರಮದ ಅಧ್ಯಕ್ಷರಾದ ಬಸವಲಿಂಗ ಸ್ವಾಮೀಜಿಗಳು ಚಾಲನೆ ನೀಡಿದರು.
ಪ್ರತಿ ವರ್ಷದಂತೆ ನಗರದ ಜ್ಞಾನ ಯೋಗಾಶ್ರಮದಲ್ಲಿ ವೇದಾಂತ ಕೇಸರಿ ಮಲ್ಲಿಕಾರ್ಜುನ ಮಹಾಶಿವಯೋಗಿಗಳವರ ಸ್ಮರಣೋತ್ಸವ ಹಾಗೂ ಗುರುಪೂರ್ಣಿಮಾ ಅಂಗವಾಗಿ ಜೆ.ಎಸ್.ಎಸ್ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದ್ದು, 6 ಜನ ನುರಿತ ವೈದ್ಯರು ಹಾಗೂ 10 ಜನಶುಶ್ರೂಕಿಯರ ತಂಡವು ಮೊದಲ ದಿನವೇ ವಿವಿಧೆಡೆಯಿಂದ ಆಗಮಿಸಿದ 600ಕ್ಕೂ ಹೆಚ್ಚು ಭಕ್ತರಿಗೆ ರಕ್ತದೊತ್ತಡ, ಮದುಮೇಹ ಹಾಗೂ ಇಸಿಜಿ ತಪಾಸಣೆ ನಡೆಸಲಾಯಿತು. ಗುರುಪೂರ್ಣಿಮೆ ದಿನವಾದ ಗುರುವಾರ 1,000ಕ್ಕೂ ಹೆಚ್ಚು ಜನರಿಗೆ ಆರೋಗ್ಯ ತಪಾಸಣೆ ನಡೆಸುವ ಗುರಿ ಹೊಂದಲಾಗಿದೆ. ತಪಾಸಣೆ ಜೊತೆಗೆ ಉಚಿತವಾಗಿ ಔಷಧಿ ಕೂಡ ವಿತರಿಸಲಾಗುತ್ತಿದೆ ಎಂದು ಆಸ್ಪತ್ರೆಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಶರಣ್ ಮಳಖೇಡ್ಕರ್ ಮಾಹಿತಿ ನೀಡಿದರು.
ವೈದ್ಯರ ತಂಡ; ಡಾ.ರಾಮಚಂದ್ರ ಸೋನವಾಲೆ, ಡಾ.ರಾಕೇಶ ಪಾಟೀಲ, ಡಾ.ಶಿರೀಶ ಕನ್ನೂರ, ಡಾ.ಬಲವಂತರಾಯ ಮಸಳಿ, ಡಾ.ವೀಣಾ ಪಾಟೀಲ (ದಿವಟೇರ), ಡಾ.ಸಂಗಮೇಶ ಮಠಪತಿ ಹಾಗೂ 10 ಜನ ಶುಶ್ರೂಕಿಯರು ಸೇರಿ ಒಟ್ಟು 16 ಜ ಸಿಬ್ಬಂದಿಗಳ ತಂಡ ಎರಡು ದಿನಗಳ ಕಾಲ ಆರೋಗ್ಯ ಸೇವೆ ಕಲ್ಪಿಸಲಿದೆ.

