ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಸವಾದಿ ಶರಣರ ವಚನಗಳು ಸತ್ಯ, ಶುದ್ಧ, ಪರಿಶ್ರಮದ ಕಾಯಕದಿಂದ ನೆಮ್ಮದಿ ಸಂತೃಪ್ತಿ ನೀಡುತ್ತವೆ. ಅದರಲ್ಲಿ ಮುಖ್ಯವಾಗಿ ದಾಸೋಹ, ಸಮಾನತೆ, ಪರಿಶುದ್ಧತೆ ಎಲ್ಲ ವಿಷಯ ವಸ್ತುಗಳ ಶರಣರ ವಚನಗಳಲ್ಲಿ ಅಡಕವಾಗಿವೆ ಎಂದು ಉಪನ್ಯಾಸಕ ಅಮರೇಶ ಸಾಲಕ್ಕಿ ಅಭಿಪ್ರಾಯಪಟ್ಟರು.
ನಗರದ ವೀರಶೈವ ಸಭಾಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಜಿಲ್ಲಾ ಘಟಕದಿಂದ ಏರ್ಪಡಿಸಿದ್ದ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಶರಣ ‘ನಗೆಮಾರ ತಂದೆ’ ಅವರ ಅನುಭಾವ ಕುರಿತು ಉಪನ್ಯಾಸ ನೀಡಿದ ಅವರು ಶರಣ ನಗೆಮಾರ ತಂದೆ ಶರಣ ಪರಂಪರೆಯಲ್ಲಿಯೇ ಪರಿಪೂರ್ಣ ಸಾರ್ಥಕ ಬದುಕನ್ನು ಬಾಳಿ ಬೆಳಗಿದವರು ಶರಣರನ್ನು ನಗೆಸಿ ನಲಿಸಿ ಕಾಯಕ, ದಾಸೋಹಕ್ಕೆ ಪ್ರಾಮುಖ್ಯತೆ ನೀಡಿದವರು. ಅವರ ನಗೆ ಗುರು ಲಿಂಗ, ಜಂಗಮ ಸೇವೆಗೆ ಬಳಸುತ್ತ ಭೂಕೈಲಾಸವನ್ನು ಮಾಡಿದವರು. ‘ಆತುರ ವೈರಿ ಮಾರೇಶ್ವರ’ ಅಂಕಿತ ನಾಮದಿಂದ ಅನೇಕ ವಚನಗಳನ್ನು ರಚಿಸಿದ್ದಾರೆ. ಅಪಾರ ದೈವಿ ಭಕ್ತಿ, ಶ್ರದ್ಧೆ, ಸಾಕ್ಷಾತ್ಕಾರ ಪಡೆದವರು ಶರಣರ ವಚನಗಳೇ ನಮ್ಮ ಬದುಕಿಗೆ ಸಾಧನ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ನಿರ್ದೇಶಕಿ ಶಾರದಾ ಹಿರೇಮಠ ಮಾತನಾಡಿ ಬಸವಾದಿ ಶರಣರ ತತ್ವ ಆದರ್ಶಗಳನ್ನು ಜೀವನದಲ್ಲಿ ರೂಢಿಸಿಕೊಂಡು ನಗು ನಗುತ ಬಾಳ ಸಾಗಿಸಬೇಕು ಎಂದರು.
ಜಿಲ್ಲಾ ಅಧ್ಯಕ್ಷ ವಿ.ಸಿ. ನಾಗಠಾಣ ಮಾತನಾಡಿ, ಕಾಯಕದಿಂದ ಸಮ ಸಮಾಜ ನಿರ್ಮಾಣ ಮಾಡಿದ ಶರಣರು ಹಾಸ್ಯದ ಜೊತೆಗೆ ಭಕ್ತಿ, ಲಿಂಗ ಪೂಜೆ ಮೂಲಕ ಹಾಸ್ಯವನ್ನೆ ಕಾಯಕ ಮಾಡಿಕೊಂಡವರು. ಶರಣ ನಗೆಮಾರ ತಂದೆ ಅವರ ವಚನಗಳು ಅಮೃತ ನುಡಿ ಅವುಗಳನ್ನು ಜೀವನದಲ್ಲಿ ನಾವೆಲ್ಲರೂ ಅಳವಡಿಸಿಕೊಳ್ಳಬೇಕಾಗಿದೆ ಎಂದರು.
ಇದೇ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ರಾಷ್ಟç ಮಟ್ಟದ ಬಸವ ಚೇತನ ಪ್ರಶಸ್ತಿ ಪಡೆದ ಶಿಕ್ಷಕಿ ಮಹಾದೇವಿ ತೆಲಗಿ ಅವರನ್ನು ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.
ಪ್ರಧಾನ ಕಾರ್ಯದರ್ಶಿ ಬಿ.ಟಿ. ಈಶ್ವರಗೊಂಡ ಸ್ವಾಗತಿಸಿದರು. ಸಾಹಿತಿ ಸಂಗಮೇಶ ಬದಾಮಿ ನಿರೂಪಿಸಿದರು. ನಿರ್ದೇಶಕ ವಿಠ್ಠಲ ತೇಲಿ ವಂದಿಸಿದರು.
ಕಾರ್ಯಕ್ರಮದಲ್ಲಿ ಗುರುಲಿಂಗಪ್ಪ ಬಿರಾದಾರ, ಉಪಾಧ್ಯಕ್ಷ ಸಹದೇವ ನಾಡಗೌಡರ, ಡಾ. ವಿ.ಡಿ. ಐಹೊಳ್ಳಿ, ನೂತನ ಬ್ಯಾಕೋಡ, ಎಸ್.ಎನ್. ಶಿವಣಗಿ, ಮಲ್ಲಿಕಾರ್ಜುನ ಅಮರಣ್ಣನವರ, ಭೀಮಣ್ಣ ಭಜಂತ್ರಿ, ಬಸವರಾಜ ಒಂಟಗೂಡಿ, ಶರಣಗೌಡ ಪಾಟೀಲ, ಜಿ.ಬಿ. ಸಾಲಕ್ಕಿ, ಚಿದಾನಂದ ಪೋಳ, ಡಾ. ರಮೇಶ ತೇಲಿ, ಜಗದೀಶ ಮೋಟಗಿ, ಶರಣ-ಶರಣೆಯರು ಇದ್ದರು.