ಮಡಿಕೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಮಹೇಶ ಮಡಿವಾಳರ ಭರವಸೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ನಮ್ಮ ತಾಯಿ ಹಾಗೂ ತಮ್ಮನ ಸಹಕಾರದಿಂದ ಹೆಚ್ಚಿನ ವಿದ್ಯಾಭ್ಯಾಸ ಮಾಡಲು ತುಂಬಾ ಅನುಕೂಲವಾಯಿತು. ನಮ್ಮ ಮಡಿವಾಳ ಸಮಾಜದ ಮಕ್ಕಳು ಉನ್ನತ ವಿದ್ಯಾಭ್ಯಾಸ ಮಾಡಲು ಸಹಕಾರ ಮಾಡುತ್ತೇನೆ ಎಂದು ಮುದ್ದೇಬಿಹಾಳ ತಾಲೂಕಿನ ಮಡಿಕೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಮಹೇಶ ಮಡಿವಾಳರ ಹೇಳಿದರು.
ಪಟ್ಟಣದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ತಾಲೂಕು ಮಡಿವಾಳ ಮಾಚಿದೇವ ಸೇವಾ ಸಂಘ ವತಿಯಿಂದ ಇತ್ತೀಚಗೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ೪೮೨ನೇ ರ‍್ಯಾಂಕ್ ಪಡೆದ ನಿಮಿತ್ಯ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಸಿಂದಗಿ ತಾಲೂಕಿನ ಹೊನ್ನಳ್ಳಿ ಗ್ರಾಮದ ಯುವಕ, ಮುದ್ದೇಬಿಹಾಳ ತಾಲೂಕಿನ ಮಡಿಕೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಮಹೇಶ ಮಡಿವಾಳರ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು, ನನ್ನ ಈ ಸಾಧನೆಯಲ್ಲಿ ನಮ್ಮ ಕುಟುಂಬದ ಪಾತ್ರ ಮಹತ್ವದ್ದಾಗಿದೆ. ವಿದ್ಯೆ ಎಂಬುದು ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ. ಮಕ್ಕಳು ಕೇವಲ ವೇಷ ಭೂಷಣಗಳ ಕಡೆಗೆ ಮಾತ್ರ ಗಮನ ಹರಿಸದೇ ಉತ್ತಮ ಸಂಸ್ಕಾರ ರೂಢಿಸಿಕೊಂಡು ದೇಶದ ಅಭಿವೃದ್ಧಿಗೆ ಮತ್ತು ಬದಲಾವಣೆಗೆ ಮುಂದಾಗಬೇಕು ಎಂದರು.
ಈ ವೇಳೆ ಶಿಕ್ಷಕ ಮಕ್ಕಳ ಸಾಹಿತಿ ಬಸವರಾಜ ಅಗಸರ, ಶಿವಾನಂದ ಶಾಹಾಪೂರ, ಭೀಮಾಶಂಕರ ಮಾಡಬಾಳ, ಸುನಂದ ಯಂಪೂರೆ ಮಾತನಾಡಿದರು.
ತಾಲೂಕು ಮಡಿವಾಳ ಸಂಘದ ಅಧ್ಯಕ್ಷ ಗುರು ಅಗಸರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೆಪಿಟಿಸಿಎಲ್ ಗ್ರಾಮೀಣ ಭಾಗದ ಅಧಿಕಾರಿ ಬಸವರಾಜ ಮಡಿವಾಳರ ಸೇರಿದಂತೆ ಸಮಾಜದ ಮುಖಂಡರು ಭಾಗವಹಿಸಿ ಸನ್ಮಾನಿಸಿ ಗೌರವಿಸಿದರು. ಸಮಾರಂಭದಲ್ಲಿ ತಾಲೂಕಿನ ಮಡಿವಾಳ ಸಮಾಜದ ಹಾಗೂ ವಿವಿಧ ಸಂಘ ಹಾಗೂ ಸಮಾಜದ ಪದಾಧಿಕಾರಿಗಳು ಇದ್ದರು.

