ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಸನಾತನ ಧರ್ಮದ ಸ್ಥಾಪನೆಗಾಗಿ ಶಂಕರಾಚಾರ್ಯರ ಕೊಡುಗೆ ಅಪಾರವಾದದ್ದು ಎಂದು ಸದ್ಗುರು ಭೀಮಾಶಂಕರ ಮಠದ ಪೀಠಾಧಿಪತಿ ದತ್ತಪ್ಪಯ್ಯ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಸಂಗಮೇಶ್ವರ ದೇವಸ್ಥಾನದಿಂದ ಸದ್ಗುರು ಭೀಮಾಶಂಕರ ಮಠದವರೆಗೆ ಅದ್ವೈತ ಸಿದ್ದಾಂತದ ಮಹಾಗುರು ಶಂಕರಾಚಾರ್ಯರ ಬೃಹತ್ ಶೋಭಾ ಯಾತ್ರೆಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಶಂಕರಾಚಾರ್ಯ ಜಯಂತಿ ನಿಮಿತ್ತವಾಗಿ ಹಲವಾರು ಕಾರ್ಯಕ್ರಮಗಳನ್ನು ಶ್ರೀಮಠದಲ್ಲಿ ಹಮ್ಮಿಕೊಂಡಿದ್ದು ತಾವೆಲ್ಲರೂ ಆಗಮಿಸಿದ್ದಕ್ಕೆ ಸಂತಸ ತಂದಿದೆ. ಆದಿಗುರು ಶಂಕರಾಚಾರ್ಯರು ನಾಲ್ಕು ಪೀಠಗಳನ್ನು ಸ್ಥಾಪಿಸಿ ಸನಾತನ ಧರ್ಮದ ಮಹತ್ವವನ್ನು ಸಾರಿದ್ದಾರೆ. ಅಂತಹ ಮಹಾನ್ ವ್ಯಕ್ತಿ ಗುರು ಶಂಕರಾಚಾರ್ಯರು ನಾಲ್ಕು ಪೀಠಗಳಲ್ಲಿ ಒಂದಾದ ಶೃಂಗೇರಿ ಶಾರದಾ ಪೀಠವು ನಮ್ಮಲ್ಲೇ ಇದೆಯೆಂದರು. ಶಂಕರಾಚಾರ್ಯರು ಸನಾತನ ಧರ್ಮ ರಕ್ಷಣೆಗಾಗಿ ತಮ್ಮ ಬದುಕನ್ನು ಅರ್ಪಿಸಿದ್ದಾರೆ ಎಂದರು.
ಅದ್ವೈತ ಸಿದ್ದಾಂತದ ಮಹಾಗುರು ಎಂದೇ ಖ್ಯಾತರಾದ ಶ್ರೀ ಶಂಕರಾಚಾರ್ಯರ ಜಯಂತಿ ನಿಮಿತ್ತವಾಗಿ ಇಂದು ಪಟ್ಟಣದಲ್ಲಿ ಸಂಗಮೇಶ್ವರ ದೇವಸ್ಥಾನದಿಂದ ಸದ್ಗುರು ಭೀಮಾಶಂಕರ ಮಠದವರೆಗೆ ಬೃಹತ್ ಶೋಭಾ ಯಾತ್ರೆಯನ್ನು ಸಮುದಾಯದ ಮುಖಂಡರೆಲ್ಲರೂ ಸೇರಿ ಯಶಸ್ವಿಗೊಳಿಸಿದ್ದೀರಿ ಎಂದು ಹೇಳಿದರು.
ಈ ವೇಳೆ ಶ್ರೀನಾಥ್ ಜೋಶಿ, ನಾರಾಯಣ ಕುಲಕರ್ಣಿ, ರವೀಂದ್ರ ಕುಲಕರ್ಣಿ, ಅವದೂತ ಜೋಶಿ, ವಿಜಯ ಕುಲಕರ್ಣಿ, ವಿಕ್ರಂ ಕುಲಕರ್ಣಿ, ಪವನ್ ಕುಲಕರ್ಣಿ, ಆನಂದ ಕುಲಕರ್ಣಿ, ಗಣ್ಯವ್ಯಾಪಾರಸ್ಥ ರಾಜು ಕುಲಕರ್ಣಿ, ಗುಂಡು ಕುಲಕರ್ಣಿ ಸೇರಿದಂತೆ ಸಮುದಾಯದ ಮುಖಂಡರು ಹಾಗೂ ಮಹಿಳೆಯರು ಇದ್ದರು.

