“ನಮ್ಮನ್ನು ಕೆಣಕಿದರೆ ನಿಮ್ಮ ಅಡ್ರೆಸ್ ಇರಲ್ಲ” ಎಂಬ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಬಿಜೆಪಿ ನಾಯಕರ ಗುಡುಗು
ಬೆಂಗಳೂರು: ನಿಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವುದರ ಬದಲು ಬಿಜೆಪಿ, ಆರ್.ಎಸ್.ಎಸ್ ಗೆ ‘ನಾವು ತಿರುಗಿ ಬಿದ್ದರೆ ನಿಮ್ಮ ಅಡ್ರೆಸ್ಸೇ ಸಿಗುವುದಿಲ್ಲ’ ಎಂಬ ನಿಮ್ಮ ಹೇಳಿಕೆ ‘ನವಿಲು ಕುಣಿಯುವುದನ್ನು ನೋಡಿ ಕೆಂಬೂತ ಪುಕ್ಕ ತೆರೆಯಿತು’ ಎಂಬಂತಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುರಿತು ಬಿಜೆಪಿ ವ್ಯಂಗ್ಯವಾಡಿದೆ.
ಹುಬ್ಬಳ್ಳಿಯಲ್ಲಿ ಗುರುವಾರ ಕೇಂದ್ರ ಸರ್ಕಾರ ಬೆಲೆ ಏರಿಕೆ ನೀತಿ ವಿರುದ್ಧ ಕಾಂಗ್ರೆಸ್ ರ್ಯಾಲಿ ನಡೆಸಿತ್ತು. ರ್ಯಾಲಿ ಉದ್ದೇಶಿಸಿ ಮಾತನಾಡಿದ್ದ ಮಲ್ಲಿಕಾರ್ಜುವನ ಖರ್ಗೆಯವರು, ನಮ್ಮ ಕಾರ್ಯಕರ್ತರಿಗೆ ಒಂದೇ ಒಂದು ಸೂಚನೆ ಕೊಟ್ಟರೆ ರಾಜ್ಯದಲ್ಲಿ ಬಿಜೆಪಿ, ಆರ್.ಎಸ್.ಎಸ್ ಬಾಲ ಬಿಚ್ಚಲು ಬಿಡುವುದಿಲ್ಲ. ನಮ್ಮನ್ನು ಕೆಣಕಬೇಡಿ, ನಾವು ತಿರುಗಿಬಿದ್ದರೆ ನಿಮ್ಮ ಅಡ್ರೆಸ್ಸೇ ಸಿಗುವುದಿಲ್ಲ ಎಂದು ಗುಡುಗಿದ್ದರು.
ಈ ಹೇಳಿಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ಬಿಜೆಪಿ ಹಾಗೂ ಆರ್.ಎಸ್.ಎಸ್ ಸಂಘಟನೆಗಳ ಕುರಿತು ನೀವು ವಾರ್ನಿಂಗ್ ನೀಡಿರುವ ಪರಿ ಗಮನಿಸಿದರೆ ಸರ್ವಾಧಿಕಾರಿ ಸಂಸ್ಕೃತಿಯ ಭಾಗವೆಂಬಂತೆ ಭಾಸವಾಗುತ್ತಿದೆ. ನಿಮ್ಮ ಮಾತಿನ ದಾಟಿ, ನಿಮ್ಮ ಹಿರಿತನ ಹಾಗೂ ಅನುಭವದ ಘನತೆಯನ್ನು ಕುಗ್ಗಿಸಿದೆ. ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿ ಯುವ ಕಾಂಗ್ರೆಸ್ ಕಾರ್ಯಕರ್ತರೊಬ್ಬರ ರೀತಿಯಲ್ಲಿ ಹೇಳಿಕೆ ನೀಡಿರುವ ರೀತಿ ಅತ್ಯಂತ ವಿಪರ್ಯಾಸವೇ ಸರಿ ಎಂದು ಕಿಡಿಕಾರಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘ ರಾಷ್ಪ್ರಭಕ್ತರ ಸಂಘಟನೆ, ಭಾರತೀಯ ಜನತಾ ಪಾರ್ಟಿಯು ರಾಷ್ಟ್ರ ಕಟ್ಟುವುದಕ್ಕಾಗಿ ಸಂಕಲ್ಪಿಸಿ ಜನ್ಮತಾಳಿದ ರಾಜಕೀಯ ಪಕ್ಷ, ಕಾಂಗ್ರೆಸ್ ನಂತೆ ವ್ಯಕ್ತಿ ಪೂಜೆ, ಕುಟುಂಬ ಪೂಜೆಗೆ ತನ್ನನ್ನು ತೊಡಗಿಸಿಕೊಂಡ ಪಕ್ಷವಲ್ಲ, ಭಟ್ಟಂಗಿತನ ನಿಮ್ಮ ಪಕ್ಷದ ಧ್ಯೇಯಘೋಷ, ಎಂದೂ ರಾಷ್ಟ್ರದ ಬಗ್ಗೆ ಚಿಂತನೆ ನಡೆಸದೇ,ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯದೇ ಬಡವರನ್ನು ಬಡವರನ್ನಾಗಿಯೇ ಇರಿಸಿದ ಪಾಪದ ಫಲ ಇಂದಿನ ನಿಮ್ಮ ಕಾಂಗ್ರೆಸ್ ನ ಹೀನಾಯ ಸ್ಥಿತಿಗೆ ಕಾರಣವಾಗಿದೆ. ಇಷ್ಟಾಗಿಯೂ ನಿಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವುದರ ಬದಲು ಬಿಜೆಪಿ, ಆರ್.ಎಸ್.ಎಸ್ ಗೆ ‘ನಾವು ತಿರುಗಿ ಬಿದ್ದರೆ ನಿಮ್ಮ ಅಡ್ರೆಸ್ಸೇ ಸಿಗುವುದಿಲ್ಲ’ ಎಂಬ ನಿಮ್ಮ ಹೇಳಿಕೆ ‘ನವಿಲು ಕುಣಿಯುವುದನ್ನು ನೋಡಿ ಕೆಂಬೂತ ಪುಕ್ಕ ತೆರೆಯಿತು’ ಎಂಬಂತಾಗಿದೆ.
ನಿಮ್ಮ ಪಕ್ಷದ ಒಬ್ಬರು, ಬಿಜೆಪಿ-ಆರ್.ಎಸ್.ಎಸ್ ಬಾಲ ಬಿಚ್ಚಲು ಬಿಡುವುದಿಲ್ಲ ಎಂದು ಆರ್ಭಟಿಸಿದರೆ, ಮತ್ತೊಬ್ಬರು ರಾಜ್ಯದ ಯಾವುದೇ ಭಾಗದಲ್ಲಿ ಬಿಜೆಪಿ ತನ್ನ ಚಟುವಟಿಕೆ ನಡೆಸಲು ಎಲ್ಲಿಯೂ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡುತ್ತಾರೆ. ಕರ್ನಾಟಕದಲ್ಲಿ ಪಾಳೆಗಾರಿಕೆ ರಾಜಕಾರಣಕ್ಕೆ, ಸರ್ವಾಧಿಕಾರಿ ಆಡಳಿತಕ್ಕೆ ಅವಕಾಶ ಇಲ್ಲ ಎಂಬುದರ ಇತಿಹಾಸ ನಿಮಗೆ ಹಾಗೂ ನಿಮ್ಮ ಪಕ್ಷದವರಿಗೆ ನೆನಪಿರಲಿ ಎಂದು ಎಚ್ಚರಿಸಿದ್ದಾರೆ.
ಆರೆಸ್ಸೆಸ್ ಆರಂಭದಿಂದಲೂ ಮೀಸಲಾತಿ ವಿರೋಧಿ :ಖರ್ಗೆ
ಹುಬ್ಬಳ್ಳಿ: ಆರ್‌ಎಸ್‌ಎಸ್ ಮತ್ತು ಸಂಘ ಪರಿವಾರಗಳು ಆರಂಭದಿಂದಲೂ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯವನ್ನು ವಿರೋಧಿಸುತ್ತಲೇ ಬಂದಿವೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಗುರುವಾರ ಹೇಳಿದರು.
ಹುಬ್ಬಳ್ಳಿಯ ಗಿರಣಿಚಾಲ ಮೈದಾನದಲ್ಲಿ ಗುರುವಾರ ನಡೆದ ಕಾಂಗ್ರೆಸ್ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಜಾತಿ ಆಧಾರಿತ ಮೀಸಲಾತಿಯನ್ನು ವಿರೋಧಿಸುತ್ತಿದ್ದರು ಎಂಬ ಬಿಜೆಪಿ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಾವು ಜಾತಿ ಜನಗಣತಿಯನ್ನು ವಿರೋಧಿಸುತ್ತಿರುವುದಾದರೆ ಎರಡು ವರ್ಷಗಳ ಹಿಂದೆ ಜಾತಿ ಜನಗಣತಿಯನ್ನು ಕೋರಿ ಕೇಂದ್ರಕ್ಕೆ ಏಕೆ ಪತ್ರ ಬರೆಯುತ್ತಿದ್ದೆವು? ಬಿಜೆಪಿ ಜನರ ಕಲ್ಯಾಣದ ಬಗ್ಗೆ ಮಾತ್ರ ಕಾಳಜಿ ವಹಿಸುತ್ತದೆ ಎಂದು ನಟಿಸುವ ಮೂಲಕ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದೆ. ಆದರೆ, ಅದು ನಕಲಿ. ಅವರು (ಬಿಜೆಪಿ) ಅದನ್ನು ರಾಜಕೀಯಕ್ಕಾಗಿ ಮಾಡುತ್ತಿದ್ದಾರೆಂದು ಕಿಡಿಕಾರಿದರು.
“ಜನಗಣತಿ ಜತೆಗೆ ಜಾತಿ ಗಣತಿಗೂ ಕೇಂದ್ರ ಸರ್ಕಾರ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದು, ಕೇಂದ್ರ ಸರ್ಕಾರದ ಈ ನಿರ್ಧಾರವು ಜಾತಿ ಜನಗಣತಿಯ ಹೆಸರಿನಲ್ಲಿ ಸಮಾಜವನ್ನು ವಿಭಜಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಯತ್ನಗಳಿಗೆ ಅಂತ್ಯ ಹಾಡಲಿದೆ.”
– ಬಿ.ವೈ. ವಿಜಯೇಂದ್ರ
ಬಿಜೆಪಿ ರಾಜ್ಯಾಧ್ಯಕ್ಷರು
ಕಾಂಗ್ರೆಸ್ ಅವಧಿಯಲ್ಲಿ ಜಾತಿ ಸಮೀಕ್ಷೆ ಏಕೆ ಮಾಡಲಿಲ್ಲ?
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಮಾತನಾಡಿ, ಕಾಂಗ್ರೆಸ್ ಅವಧಿಯಲ್ಲಿ ಜಾತಿ ಸಮೀಕ್ಷೆಯನ್ನು ಏಕೆ ಮಾಡಲಿಲ್ಲ ಎಂದು ಸವಾಲು ಹಾಕಿದರು.
ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದು ಜಾತಿ ಗಣತಿ ನಡೆಸಲು ತೀರ್ಮಾನಿಸಿದೆ. ಬ್ರಿಟಿಷರ ನಂತರ ನೆಹರು, ಇಂದಿರಾಗಾಂಧಿ, ರಾಜೀವ್‌ಗಾಂಧಿ ಪ್ರಧಾನಿಯಾದರೂ, ಕಾಂಗ್ರೆಸ್ ಜಾತಿ ಸಮೀಕ್ಷೆ ಮಾಡಲಿಲ್ಲ. ಕಾಂಗ್ರೆಸ್‌ಗೆ ಅಂತಹ ಸಾಮಾನ್ಯ ಜ್ಞಾನ ಕೂಡ ಇಲ್ಲ. ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಜಾತಿ ಗಣತಿ ಪ್ರಸ್ತಾಪವನ್ನು ತಿರಸ್ಕರಿಸಲಾಗಿತ್ತು. 2029 ಕ್ಕೆ ಮಹಿಳಾ ಮೀಸಲಾತಿ ತರಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಇದಕ್ಕೆ ಜನಗಣತಿ ಹಾಗೂ ಜಾತಿ ಸಮೀಕ್ಷೆ ನೆರವಾಗಲಿದೆ. ಇಂತಹ ಉತ್ತಮ ಕೆಲಸ ಮಾಡುತ್ತಿರುವ ಪ್ರಧಾನಿಗೆ ಅಭಿನಂದನೆ ತಿಳಿಸುತ್ತೇನೆ ಎಂದು ಹೇಳಿದರು.

