ಮುಸ್ಲಿಂ ಕುಟುಂಬದಿಂದ ಬಸವ ಜಯಂತಿ ಆಚರಣೆ | ಶಾಂತಿ ಸೌಹಾರ್ದತೆಯಿಂದ ಕೂಡಿ ಬಾಳಲು ಪ್ರಾರ್ಥನೆ
ಉದಯರಶ್ಮಿ ದಿನಪತ್ರಿಕೆ
ಬೆಂಗಳೂರು: ಭೂಮಿ ಮೇಲಿನ ಭಯೋತ್ಪಾದನೆ ನಿರ್ಮೂಲನೆಯಾಗಬೇಕಾದರೆ, ಜಗತ್ ಜ್ಯೋತಿ ಬಸವಣ್ಣನವರ ದಯೋತ್ಪಾದನೆ (ದಯೆವೇ ಧರ್ಮದ ಮೂಲ) ಸಿದ್ದಾಂತ ಮೈಗೂಡಿಸಿಕೊಂಡಾಗ ಮಾತ್ರ ಸಾಧ್ಯ ಎಂದು ಆರಕ್ಷಕ ಮೌಲಾಲಿ ಆಲಗೂರ ಹೇಳಿದರು.
ಕಳೆದ ಮೂರು ವರ್ಷಗಳಿಂದ ಆಡುಗೋಡಿಯ ತಮ್ಮ ಪೊಲೀಸ್ ವಸತಿ ಗೃಹದಲ್ಲಿ ಬಸವಣ್ಣನವರ ಜಯಂತಿ ಆಚರಣೆ ಮಾಡುತ್ತ ಬರುತ್ತಿರುವ ಮೌಲಾಲಿ ಅವರು ಪೋಟೋಗೆ ಪೂಜೆ ಮಾಡಿ ಮಾತನಾಡಿದರು.
ಇತ್ತೀಚೆಗೆ ಸಮಾಜದಲ್ಲಿ ಅಮಾನವೀಯ ಕೃತ್ಯಗಳು ಹೆಚ್ಚುತ್ತಿವೆ, ಶ್ರೇಷ್ಠ ಜೀವಿ ಎನಿಸಿಕೊಂಡ ಮನುಜ ಧರ್ಮ, ಜಾತಿಗಳ ಹೆಸರಿನಲ್ಲಿ ಸಂಘರ್ಷದ ಹಾದಿ ತುಳಿಯುತ್ತಿರುವುದು ವಿಷಾದನೀಯ. ಬಸವಣ್ಣನವರು 12 ನೇ ಶತಮಾನದಲ್ಲಿಯೇ ಪ್ರತಿಪಾದಿಸಿದ ಸಮಾನತೆ, ಸಹಿಷ್ಣುತೆ, ಭ್ರಾತೃತ್ವ ಸೇರಿದಂತೆ ಮಾನವೀಯ ಮೌಲ್ಯಾಧಾರಿತ ಚಿಂತನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೋಳ್ಳದೇ ಇರುವುದು ನೋವಿನ ಸಂಗತಿ ಎಂದರು.
ಆರಕ್ಷಕ ಮಷಾಕ್ ನಾಯ್ಕೋಡಿ ಮಾತನಾಡಿ, ಬಸವಣ್ಣನವರು ಹೇಳಿದ ಹಾಗೆ ಇವನಾರವ ಇವನಾರವ ಇವನಾರವ ಎನ್ನದೆ, ಇವ ನಮ್ಮವ ಇವ ನಮ್ಮವ, ಎಂಬ ಭಾವ ಗಟ್ಟಿಗೊಂಡಾಗಲೇ ನಾವು ಬಸವ ಕಂಡ ಭಾರತ ನಿರ್ಮಿಸಲು ಸಾಧ್ಯ ಆದ್ದರಿಂದ ಆಂತರಿಕ ಕಲಹ ಬಿಟ್ಟು, ವಿಶ್ವಗುರುವಾಗಲು ಪಣ ತೊಟ್ಟು, ಕಾಯಕದಲ್ಲಿಯೇ ಕೈಲಾಸ ಕಾಣಲು ಶ್ರಮಿಸೋಣ ಎಂದು ಹೇಳಿದರು.
ಇತ್ತೀಚೆಗೆ ಉಗ್ರರಿಂದ ಹತ್ಯೆಗಿಡಾದ 26 ಜನ ಭಾರತೀಯರ ಆತ್ಮಕ್ಕೆ ಶಾಂತಿ ಕೋರಿ, ಅವರ ಕುಟುಂಬಗಳಿಗೆ ನೋವು ಸಹಿಸಿಕೊಳ್ಳುವ ಶಕ್ತಿ ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡಿದರು. ಮಕ್ತುಮ ಪಟೇಲ್ ಆಲಗೂರ, ಸಾನಿಯಾ ಸೊನ್ನ, ಮಹಮ್ಮದ್ ಜುಬೇರ್, ಮೊಹಮ್ಮದ್ ಜಯಾನ್, ಜುನೇರಾ, ಶಕೀಲ್, ಸೇರಿದಂತೆ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

