ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಸಮೀಪದ ಯಲಗೂರದ ಆಂಜನೇಯ ದೇವಸ್ಥಾನದಲ್ಲಿ ಗುರುವಾರ ಆವರಣದಲ್ಲಿನ ಮೂರು ಹುಂಡಿಗಳನ್ನು ಸುಮಾರು ಎರಡು ವರ್ಷಗಳ ನಂತರ ಒಡೆದು ಇಡೀ ದಿನ ಹುಂಡಿಯಲ್ಲಿನ ಹಣಗಳ ಎಣಕೆ ಕಾರ್ಯ ನಡೆಯಿತು.
ಹಿಂದೂ ಹುಲಿ ಬಸನಗೌಡ ಪಾಟೀಲ ಯತ್ನಾಳ ಮತ್ತೇ ಬಿಜೆಪಿಗೆ ಬರುವಂತಾಗಲಿ ಎಂಬ ಭಕ್ತನೊಬ್ಬನ ಬೇಡಿಕೆ ಹುಂಡಿಯಲ್ಲಿ ಕಂಡು ಬಂತು. ಇಡೀ ದಿನ ಸಾಮಾಜಿಕ ಜಾಲತಾಣದಲ್ಲಿ ಈ ಹರಕೆಯೇ ಹೆಚ್ಚು ವೈರಲ್ ಆಯಿತು. ಸರ್ಕಾರಿ ನೌಕರಿ ಕೊಡಿಸು, ನಾನು ಪ್ರೀತಿಸಿದ ಹುಡುಗಿ ನನಗೆ ಸಿಗುವಂತಾಗಲಿ, ಒಂದು ವರ್ಷದಿಂದ ಅನುಭವಿಸಿದ ಕಷ್ಟ ನೋವು ಮಾಯಮಾಡು ಎಂಬಿತ್ಯಾದಿ ಬೇಡಿಕೆಗಳುಳ್ಳ ಪತ್ರಗಳು ಕಂಡು ಬಂದವು.
ಭಕ್ತರ ಹಲವು ತರೇಹವಾರಿ ಬೇಡಿಕೆಯುಳ್ಳ ಪತ್ರಗಳು ಪತ್ತೆಯಾಗಿವೆ. ಮೂರು ಹುಂಡಿಗಳಲ್ಲಿ ಹಣದ ಜತೆಗೆ ಹರಿದ ನೋಟು, ಚಿನ್ನ, ಬೆಳ್ಳಿಯ ಆಭರಣಗಳು, ಹಳೆಯ 2000 ನೋಟುಗಳು ಕೂಡಾ ಪತ್ತೆಯಾಗಿವೆ.
54,73,921 ರೂ ಸಂಗ್ರಹ:
ಒಟ್ಟಾರೇ ವಿವಿಧ ನೋಟುಗಳು ಹಾಗೂ ನಾಣ್ಯಗಳ ಎಣಕೆ ಕಾರ್ಯ ಸಂಜೆ ಪೂರ್ಣಗೊಂಡಿತು. ಪೂರ್ಣಗೊಂಡಾಗ ಒಟ್ಟಾರೇ ಮೂರು ಹುಂಡಿಗಳಿಂದ 54,73,921 ರೂಗಳು ಸಂಗ್ರಹವಾಗಿವೆ. ಇದರ ಜತೆಗೆ 239 ಗ್ರಾಂ ಬೆಳ್ಳಿ, 3 ಗ್ರಾಂ 480 ಮಿ. ಗ್ರಾಂ ಚಿನ್ನ ಪತ್ತೆಯಾಗಿದೆ.
ದೇವಸ್ಥಾನ ಸಮಿತಿಯವರು, ಅರ್ಚಕರು ಗ್ರಾಮದ ಪ್ರಮುಖರು, ಯಲಗೂರು, ನಿಡಗುಂದಿ, ಬಾಗಲಕೋಟೆಯ ಕೆನರಾ, ಯೂನಿಯನ್ ಬ್ಯಾಂಕ್ ಗಳ ಸಿಬ್ಬಂದಿಗಳು ಸೇರಿದಂತೆ ಸುಮಾರು 60ಕ್ಕೂ ಹೆಚ್ಚು ಜನರು ಹುಂಡಿ ಹಣ ಎಣಿಕೆಯಲ್ಲಿ ಪಾಲ್ಗೊಂಡಿದ್ದರು.
ದೇವಸ್ಥಾನ ಸಮಿತಿಯ ಅಧ್ಯಕ್ಷ ಅನಂತ ಓಂಕಾರ, ಅನ್ನದಾಸೋಹ ಸಮಿತಿಯ ಅಧ್ಯಕ್ಷ ಶ್ಯಾಮ ಪಾತರದ, ಶ್ರೀಶೈಲ ಡೆಂಗಿ, ಗುಂಡಪ್ಪ ಪೂಜಾರ, ಗುಂಡಪ್ಪ ತಳವಾರ, ಗೋಪಾಲ ಗದ್ದನಕೇರಿ, ಮಹಾಂತೇಶ ಡೆಂಗಿ, ಆನಂದ ಪೂಜಾರ, ಭೀಮಣ್ಣ ಪೂಜಾರಿ, ಸಂತೋಷ ಪೂಜಾರ, ಗುಂಡುರಾವ ಕುಲಕರ್ಣಿ, ಗುರುರಾಜ ಪರ್ವತಿಕರ, ಜಿ.ವಿ ಪೂಜಾರ ಮೊದಲಾದವರು ಇದ್ದರು.

