ಜಿಲ್ಲಾಧಿಕಾರಿ ಟಿ.ಭೂಬಾಲನ್ ರಿಂದ ನಗರದ ವಿವಿಧ ಕಾಮಗಾರಿಗಳು-ಅತಿಕ್ರಮಣ ಪ್ರದೇಶಗಳ ಸ್ಥಳ ಪರಿಶೀಲನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾಧಿಕಾರಿ ಟಿ.ಭೂಬಾಲನ್ ನಗರದ ವಿವಿಧೆಡೆ ಕೈಗೊಂಡಿರುವ ಕಾಮಗಾರಿ ಹಾಗೂ ಅತಿಕ್ರಮಣವಾಗಿರುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಹಶೀಲ್ದಾರ ಕಚೇರಿ ಹಿಂಭಾಗದಲ್ಲಿರುವ ಖಾಲಿ ಜಾಗವನ್ನು ಪರಿಶೀಲನೆ ನಡೆಸಿದ ಅವರು, ಸದರಿ ಸ್ಥಳದಲ್ಲಿರುವ ತಗ್ಗು ಗುಂಡಿಗಳನ್ನು ದುರಸ್ತಿಗೊಳಿಸಿ, ಸಮತಟ್ಟುಗೊಳಿಸಿ ಪಾಲಿಕೆ ಆಯುಕ್ತರಿಗೆ ಸೂಚಿಸಿದ ಅವರು, ನಗರದಾದ್ಯಂತ ವಿವಿಧೆಡೆ ೧೦ ಸಾವಿರ ಗಿಡಗಳನ್ನು ಬೆಳೆಸುವ ಮೂಲಕ ಹಸಿರು ವಲಯಕ್ಕೆ ಕ್ರಮ ವಹಿಸುವಂತೆ ಅರಣ್ಯಾಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ನಗರದ ರಿಂಗ್ ರಸ್ತೆ ಶ್ರಿ ನೇತಾಜಿ ಸುಭಾಷಚಂದ್ರ ಭೋಸ ವೃತ್ತದಿಂದ ಸೋಲಾಪುರ ರಾಷ್ಟ್ರೀಯ ಹೆದ್ದಾರಿವರೆಗೆ ಕೈಗೊಂಡಿರುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ, ಸಾರ್ವಜನಿಕರ ಸುಗಮ ಸಂಚಾರಕ್ಕೆ ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.
ನಗರದ ದರ್ಗಾ ರಸ್ತೆಯಲ್ಲಿ ಸೋಲಾಪುರ ಹಳೆಯ ಬೈಪಾಸ್‌ದಿಂದ ದರ್ಗಾ (ಇಟ್ಟಂಗಿಹಾಳ) ರಸ್ತೆವರೆಗೆ ಮುಖ್ಯ ರಸ್ತೆಯಲ್ಲಿರುವ ಅನಧಿಕೃತ- ಒತ್ತುವರಿಯಾಗಿರುವ ಕಟ್ಟಡ-ಶೆಡ್‌ಗಳನ್ನು ತೆರವುಗೊಳಿಸಿ ರಸ್ತೆ ಅಗಲೀಕರಣಕ್ಕಾಗಿ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಲು ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.
ವಿಜಯಪುರ ನಗರದ ಆಶ್ರಮಗೆ ಹೋಗುವ ಮುಖ್ಯ ರಸ್ತೆಯಲ್ಲಿ ಒತ್ತುವರಿ ಮಾಡಿಕೊಂಡು ನಿರ್ಮಿಸಿಕೊಂಡ ವಸತಿ ಹಾಗೂ ವಾಣಿಜ್ಯ ಕಟ್ಟಡಗಳು, ಶೆಡ್‌ಗಳನ್ನು ತೆರವುಗೊಳಿಸಲು ಸ್ಥಳ ಪರಿಶೀಲನೆ ನಡೆಸಿ, ನಿಯಮಾನುಸಾರ ಒತ್ತುವರಿ ತೆರವುಗೊಳಿಸಿ ರಸ್ತೆ ಅಗಲೀಕರಣ ಕಾರ್ಯಕ್ಕೆ ಅವರು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮಹಾನರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

