ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದಲ್ಲಿನ ವಿವಿಧ ಐತಿಹಾಸಿಕ ಬಾವಿಗಳನ್ನು ಮಹಾನಗರ ಪಾಲಿಕೆ ವತಿಯಿಂದ ಪುನಶ್ಚೇತನಗೊಳಿಸಿ, ಬಾವಡಿಯಲ್ಲಿರುವ ನೀರನ್ನು ಗೃಹ ಬಳಕೆಗಾಗಿ ಸಾರ್ವಜನಿಕರಿಗೆ ಪೂರೈಸುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ತಿಳಿಸಿದ್ದಾರೆ.
ವಿಜಯಪುರ ನಗರದಲ್ಲಿರುವ ಗಚ್ಚಿನಕಟ್ಟಿ ಕಾಲನಿ ಬಾವಡಿ, ಫೋಸ್ಟ್ ಆಫೀಸ್ ಆವರಣದಲ್ಲಿರುವ ಬಾವಡಿ, ಭರತ ಬಾವಡಿ, ಚಂದಾಬಾವಡಿ, ಸೈಟಲೈಟ್ ಬಸ್ ನಿಲ್ದಾಣದ ಹತ್ತಿರದ ರೂಮಾಲ ಬಾವಡಿ, ಆಕೃತಿ ಕಾಲನಿ ಬಾವಡಿ, ಕಣಕಿ ಬಜಾರ ಹತ್ತಿರದ ಸಕ್ರಿ ಬಾವಡಿ, ಚಪ್ಪರಬಂದ ಗಲ್ಲಿಯಲ್ಲಿರುವ ಮುಕ್ರಿ ಬಾವಡಿ, ಝಂಡಾ ಕಟ್ಟಾ ಹತ್ತಿರವಿರುವ ಪೇಟಿ ಬಾವಡಿ, ಮನಗೂಳಿ ಅಗಸಿ ಹತ್ತಿರವಿರುವ ಬಸರಿ ಬಾವಡಿ, ಅಂಜುಮನ್ ಕಾಲೇಜ್ ಹತ್ತಿರವಿರುವ ಬಾವಡಿ, ರಂಭಾಪುರ ಬಾವಡಿ, ವಾರ್ಡ ನಂ.೩೨ರ ಲಿಂಗೇಶ್ವರ ದೇವಸ್ಥಾನದ ಹತ್ತಿರವಿರುವ ಬಾವಡಿ ಹಾಗೂ ಶಾಹು ನಗರದ ಗುಂಡ ಬಾವಡಿಯನ್ನು ಪುನಶ್ಚೇತನಗೊಳಿಸಲಾಗಿದೆ. ಈ ಬಾವಡಿಗಳು ನೀರಿನಿಂದ ಸಮೃದ್ಧವಾಗಿದ್ದು, ಈ ಬಾವಡಿಗಳ ಪೈಕಿ ಈಗಾಗಲೇ ೬ ಬಾವಡಿಗಳ ನೀರು ಪೂರೈಕೆ ಮಾಡಲಾಗುತ್ತಿದೆ, ಇನ್ನುಳಿದ ಬಾವಿಗಳಿಂದಲೂ ಸಹ ೧೦ ದಿನಗಳೊಳಗಾಗಿ ನೀರು ಪೂರೈಕೆಗೆ ಕ್ರಮ ವಹಿಸಲಾಗುತ್ತಿದೆ.
ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದಂತೆ ಹಾಗೂ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ೨೦೨೪-೨೫ನೇ ಸಾಲಿನ ೧೫ನೇ ಹಣಕಾಸು ಅನುದಾನದಲ್ಲಿ ೯೬.೦೬ ಲಕ್ಷ ರೂ.ಗಳಲ್ಲಿ ೬ ಬಾವಿಗಳನ್ನು ಸ್ವಚ್ಛಗೊಳಿಸಿ ಪುನಶ್ಚೇತನಗೊಳಿಸಲಾಗಿದೆ. ೧೩ ಲಕ್ಷ ರೂ.ಗಳ ಪಾಲಿಕೆಯ ಅನುದಾನದಲ್ಲಿ ೧೧ ಬಾವಿಗಳ ಸ್ವಚ್ಛತೆ ಕಾಮಗಾರಿ ಕೈಗೊಳ್ಳಲಾಗಿದೆ. ಸನ್ ೨೦೨೫-೨೬ನೇ ಸಾಲಿನ ೧೫ನೇ ಹಣಕಾಸು ಆಯೋಗದ ಅನುದಾನದಲ್ಲಿ ೫೦ ಲಕ್ಷ ರೂ. ಅನುದಾನ ಮೀಸಲಿರಿಸಲಾಗಿದ್ದು, ಒಟ್ಟು ಹೊಸದಾಗಿ ೪ ಬಾವಿಗಳ ಪುನಶ್ಚೇತನ ಕಾರ್ಯ ಪ್ರಗತಿಯಲ್ಲಿದೆ ೫೦ ಲಕ್ಷ ರೂ.ಗಳ ಹೆಚ್ಚುವರಿ ಅನುದಾನದಲ್ಲಿ ನಗರದಲ್ಲಿ ಹೊಸದಾಗಿ ಗುರುತಿಸಲಾದ ವಿವಿಧ ಬಾವಿಗಳು ಹಾಗೂ ಹಿಂದಿನ ಅವಧಿಯಲ್ಲಿ ಸ್ವಚ್ಛಗೊಳಿಸಿದ ಬಾವಿಗಳು ಸೇರಿದಂತೆ ಅವುಗಳಿಗೆ ವಿದ್ಯುತ್ ಮೊಟರ್ ಅಳವಡಿಕೆ, ಪೈಪ್‌ಗಳು ಹಾಗೂ ಸಿಸ್ಟರ್ನಗಳನ್ನು ಅಳವಡಿಸಿ ಬಾವಿಗಳ ಪುನಶ್ಚೇತನ ಕಾರ್ಯ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.


