ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಸಮಾಜದ ಪ್ರತಿಯೊಬ್ಬರು ವಚನಗಳ ಸಾರ ಅರಿತು ಜೀವನದಲ್ಲಿ ಅಳವಡಿಸಿಕೊಂಡು ಕಾಯಕ ತತ್ವ ಪಾಲಿಸಿದರೆ ಬಸವಣ್ಣನವರ ಆಶಯ ಈಡೇರಿಸಿದಂತೆ ಎಂದು ಬಿಜೆಪಿ ಮುಖಂಡರಾದ ಟಿ.ಟಿ. ಹಗೇದಾಳ ಹೇಳಿದರು.
ಬುಧವಾರ ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ತಾಲೂಕು ಆಡಳಿತದಿಂದ ವಿಶ್ವಗುರು ಬಸವಣ್ಣನವರ ಜಯಂತಿಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವಣ್ಣನವರು ಸಮ ಸಮಾಜದ ನಿರ್ಮಾಣಕ್ಕೆ ಸಾಮಾಜಿಕ ಕ್ರಾಂತಿಯನ್ನು ನಡೆಸಿದ್ದಾರೆ. ವಚನಗಳ ಮೂಲಕ ಜಗತ್ತಿಗೆ ಮಾನವೀಯ ಮೌಲ್ಯಗಳನ್ನು ನೀಡಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿ ತಹಶೀಲ್ದಾರ ಎಸ್.ಎಸ್. ನಾಯಕಲಮಠ ಮಾತನಾಡಿ ಬಸವಣ್ಣನವರು ಸಮಾನತೆಯ ಹರಿಕಾರರಾಗಿ, ಮಹಾ ಮಾನವತಾವಾದಿಗಳಾಗಿ ಉತ್ತಮ ಸಮಾಜ ಕಟ್ಟಲು ತಮ್ಮ ಬದುಕಿನ ಉದ್ದಕ್ಕೂ ವಚನಗಳ ಮೂಲಕ ಜನಜಾಗೃತಿ ಕೆಲಸ ಮಾಡಿ, ಕಾಯಕದ ಮಹತ್ವವನ್ನು ಸಾರಿದ್ದಾರೆ ಎಂದು ಹೇಳಿದರು.
ಶಿಕ್ಷಕ ಎನ್.ಎ. ಬನಸೋಡೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಚನ್ನಮಲ್ಲಪ್ಪ ಗಿಡ್ಡಪ್ಪಗೋಳ, ಜನಪದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಲ್ಲಪ್ಪ ಈ ಗಣಿ, ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್. ಬಾಲಗೊಂಡ, ಸಂಗಮೇಶ ಬಿಜಾಪುರ, ಪಟ್ಟಣ ಪಂಚಾಯಿತಿ ಸದಸ್ಯ ಬಾಬು ಭಜಂತ್ರಿ, ಪ್ರಮುಖರಾದ ಗಂಗಾಧರ ಏಳಗಂಟಿ, ದಶರಥ ಈಟಿ, ಎಂ.ಆರ್. ಕಲಾದಗಿ, ಇಕ್ಬಾಲ್ ನದಾಫ್, ಶಿರಸ್ತೇದಾರ ಕೃಷ್ಣಾ ಗುಡುರ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

