ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಸವಾದಿ ಶರಣರ ಚಿಂತನೆಗಳು ನಮ್ಮೆಲ್ಲರಿಗೂ ದಾರಿದೀಪವಾಗಿದ್ದು, ಸಮಾಜ ಸುಧಾರಕ, ಸಮಾನತೆಯ ಹರಿಕಾರ, ವಿಶ್ವಗುರು ಬಸವಣ್ಣನವರು ಕೇವಲ ಕರ್ನಾಟಕದ ಸಾಂಸ್ಕೃತಿಕ ನಾಯಕರಲ್ಲ, ಅವರು ವಿಶ್ವದ ಶ್ರೇಷ್ಠ ದಾರ್ಶನಿಕರು. ವಚನಗಳ ಮೂಲಕ ಸಮಾಜದ ಓರೆ ಕೋರೆಗಳನ್ನ ತಿದ್ದಿದ, ಕಾಯಕವೇ ಕೈಲಾಸ ಎನ್ನುವ ತತ್ವದ ಅಡಿಯಲ್ಲಿ ನಮ್ಮನ್ನೆಲ್ಲಾ ಮುನ್ನಡೆಸಲು ಪ್ರೇರೇಪಿಸಿರುವ ಅವರ ಚಿಂತನೆಗಳು ನಿಜಕ್ಕೂ ನಿತ್ಯ ನೂತನ ಎಂದು ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಹೇಳಿದರು.
ಅವರು ಕೃಷಿ ವಿಶ್ವವಿದ್ಯಾಲಯದ ಕೃಷಿ ಮಹಾವಿದ್ಯಾಲಯ ವಿಜಯಪುರದಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಕೃಷಿ ವಿಶ್ವವಿದ್ಯಾಲಯದ ಸಾಧಕ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಿ ಅಭಿನಂದಿಸಿದ ಸಂಗಮೇಶ ಬಬಲೇಶ್ವರ್, ಎಲ್ಲ ವಿದ್ಯಾರ್ಥಿಗಳು ಬಸವಾದಿ ಶರಣರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವಂತೆ ಕರೆ ನೀಡಿದರು.
ತಳೆವಾಡ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಸಂಗಮೇಶ್ ಪೂಜಾರಿ ಮಾತನಾಡಿ, ವಿದ್ಯಾರ್ಥಿಗಳು ಸದಾ ಶರಣರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಬಸವಣ್ಣನವರ ಆದರ್ಶಗಳು ಎಲ್ಲರಿಗೂ ಮಾರ್ಗದರ್ಶನ ಪರವಾಗಿವೆ ಎಂದು ಹೇಳಿದರು. ವಿಜಯಪುರ ಕೃಷಿ ವಿಶ್ವವಿದ್ಯಾಲಯದ ವಿಧ್ಯಾಧಿಕಾರಿಗಳಾದ ಡಾ. ಅಶೋಕ್ ಸಜ್ಜನ ಅಧ್ಯಕ್ಷತೆ ವಹಿಸಿದ್ದರು.
ಕೃಷಿ ವಿಶ್ವವಿದ್ಯಾಲಯದ ವ್ಯವಸ್ಥಾಪನ ಮಂಡಳಿ ಸದಸ್ಯರಾದ ಶ್ರೀಮತಿ ಪಾರ್ವತಿ ಕುರ್ಲೆ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಡಾ ಎಸ್ ಬಿ ಜಗ್ಗಿನವರ, ಡಾ ಸಾವಿತ್ರಿ ಪಾಟೀಲ, ಡಾ ಬಂಗಾರಮ್ಮ ಒಡೆಯರ, ಡಾ ಹರೀಶ್ ನಾಯಕ್ ಮತ್ತು ವಿದ್ದ್ಯಾರ್ಥಿಗಳು ಪಾಲ್ಗೊಂಡಿದ್ದರು.

