ಡಾ.ಬಿ.ಆರ್.ಅಂಬೇಡ್ಕರ್ ಸರಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ನೂತನ ಕಟ್ಟಡ ಉದ್ಘಾಟಿಸಿದ ಶಾಸಕ ಅಶೋಕ ಮನಗೂಳಿ ಸಲಹೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ವಿದ್ಯಾರ್ಥಿನಿಯರ ಗುಣಮಟ್ಟದ ಶಿಕ್ಷಣದ ಕಾರಣಕ್ಕಾಗಿ ಸುಂದರ ಸುಸಜ್ಜಿತ ಶಿಸ್ತಿನಿಂದ ಕುಡಿದ ಕಟ್ಟಡವನ್ನು ಸರಕಾರ ಪೂರೈಸಿದೆ. ಇದರ ಸದುಪಯೋಗವನ್ನು ವಿದ್ಯಾರ್ಥಿನಿಯರು ಪಡೆದುಕೊಳ್ಳಬೇಕೆಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಸಿಂದಗಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸರಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಬೆಂಗಳೂರಿನ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಜಿಲ್ಲಾ ಆಡಳಿತ, ಜಿಪಂ ಹಾಗೂ ವಿಜಯಪುರ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡ ಡಾ.ಬಿ.ಆರ್.ಅಂಬೇಡ್ಕರ್ ಸರಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಉಪ-ಚುನಾವಣೆ ಸಂದರ್ಭದಲ್ಲಿ ಸದ್ಯದ ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹಾದೇವಪ್ಪನವರು ನನ್ನೊಂದಿಗೆ ಕನಿಷ್ಠ ೧೫ ದಿನಗಳವರೆಗೆ ಸಿಂದಗಿ ನಗರವನ್ನು ಸುತ್ತಾಡಿ ಇಲ್ಲಿನ ಸಮಸ್ಯೆಗಳ ನರನಾಡಿಯನ್ನು ಅರಿತವರು. ಆ ಸಂದರ್ಭದಲ್ಲಿ ಸಿಂದಗಿ ಅಭಿವೃದ್ಧಿಯ ಕುರಿತು ಚರ್ಚಿಸಿದ ವಿಷಯಗಳನ್ನು ಈಗಿನ ಎಲ್ಲ ಇಲಾಖೆಗಳ ಸಚಿವರು ಅವುಗಳ ಅನುಷ್ಠಾನಕ್ಕಾಗಿ ನನಗೆ ಸಹಕಾರ ನೀಡುತ್ತಿರುವುದನ್ನು ನಾನು ಸ್ಮರಿಸಲೇಬೇಕು. ಈ ನಿಟ್ಟಿನಲ್ಲಿ ವಸತಿ ನಿಲಯ ಪೂರ್ಣಗೊಳ್ಳಲು ಸಹಕಾರಿ ಸಚಿವರ ಸಹಕಾರ ಅವೀಸ್ಮರಣಿಯ. ಬಳಗಾನೂರ, ಆಲಮೇಲ ಹಾಗೂ ತಾಂಬಾಗಳಲ್ಲಿಯೂ ಕೂಡಾ ತಲಾ ೪೦ ಹಾಗೂ ೨೦ ಕೋಟಿ ರೂ. ವೆಚ್ಚದಲ್ಲಿ ವಸತಿ ನಿಲಯಗಳನ್ನು ನಿರ್ಮಿಸಲಾಗುವುದು. ಮೊದಲಿನ ಅವ್ಯವಸ್ಥಿತ ಕಟ್ಟಡಗಳಿಗೆ ಮರುಜೀವ ನೀಡಿ ನವೀಕರಣಗೊಳಿಸಿ ಹಾಗೂ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ಕೊಡಲಾಗಿದೆ. ಹಿಕ್ಕನಗುತ್ತಿ ಮುರಾರ್ಜಿ ವಸತಿ ಶಾಲೆಗೆ ೧೬ ಕೋಟಿ ರೂ. ತೆಗೆದಿರಿಸಲಾಗಿದ್ದು, ಒಟ್ಟಾರೆ ೧೦೦ ಕೋಟಿ ಅನುದಾನವನ್ನು ತರಲಾಗಿದೆ ಎಂದರು.
ಈ ವೇಳೆ ಹಿರಿಯ ನಿಲಯ ಪಾಲಕ ಆರ್.ಎಸ್.ಬನ್ನೆಟ್ಟಿ ಪ್ರಾಸ್ತಾವಿಕ ಮಾತನಾಡಿ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬಾಲಕರ ಹಾಗೂ ಬಾಲಕಿಯರ ವಸತಿ ನಿಲಯಗಳಿಗೆ ೧೪ ಕೋಟಿ ಅನುದಾನ ತಂದಿದ್ದಕ್ಕಾಗಿ ಸಮಾಜ ಕಲ್ಯಾಣ ಅಧಿಕಾರಿಗಳ ವತಿಯಿಂದ ಅಭಿನಂದನೆ ಸಲ್ಲಿಸುತ್ತೇವೆ. ರಾಜ್ಯಾದ್ಯಂತ ಬಿಡುಗಡೆಯಾದ ರೂ.೪೧೧ ಕೋಟಿ ರೂ.ಗಳಲ್ಲಿ ರೂ.೧೪ ಕೋಟಿಯನ್ನು ಸಿಂದಗಿ ಮತಕ್ಷೇತ್ರಕ್ಕೆ ತಂದದ್ದು ಶಾಸಕರ ಹೆಗ್ಗಳಿಕೆ ಎಂದರು.
ವೇದಿಕೆಯ ಮೇಲೆ ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ, ಉಪಾಧ್ಯಕ್ಷ ರಾಜಣ್ಣ ನಾರಾಯಣಕರ, ಗ್ಯಾರಂಟಿ ಅನುಷ್ಠಾನ ಯೋಜನೆಯ ಸದಸ್ಯರಾದ ರವಿ ದೇವರಮನಿ, ಭೀಮನಗೌಡ ಬಿರಾದಾರ, ಪುರಸಭೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಭವಾನಿ ಪಾಟೀಲ ಇದ್ದರು.
ಈ ವೇಳೆ ಶಾಸಕರು ಸಂವಿಧಾನ ಪೀಠಿಕೆಯನ್ನು ಬೋಧಿಸಿದರು.
ಕಾರ್ಯಕ್ರಮದಲ್ಲಿ ನಿಲಯ ಪಾಲಕರಾದ ಲಾಲಸಾಬ್ ಶೇಖ್, ಮಾಬುಪಟೇಲ್ ಬಿರಾದಾರ, ಮಹೇಶ ಮಾದರ, ಹಣಮಂತ ಲಾತೂರ, ಅನೀಲ ಮೋಕಾಶಿ, ಅರ್ವೇಶ ಆಲಮೇಲ, ನಫೀಸ್‌ಸುನ್ನಿಸಾ ದಫೇದಾರ, ಮೀನಾಕ್ಷ ಮಠಪತಿ, ರೇಖಾ ಹತ್ತರಕಿಹಾಳ, ಸುರೇಶ ಕಾಲೇಬಾಗ ಸೇರಿದಂತೆ ವಿದ್ಯಾರ್ಥಿನಿಯರು ಹಾಗೂ ಪಕ್ಷದ ಕಾರ್ಯಕರ್ತರು ಇದ್ದರು.

