ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಪ್ರವಚನ ಎಂದರೆ ಶ್ರೇಷ್ಠವಾದ ಮಾತು. ಬದುಕನ್ನು ಶ್ರೇಷ್ಠತೆಯತ್ತ ಕರೆದೊಯ್ಯುವ ಮಾತುಗಳಿಗೆ ಪ್ರವಚನ ಎನ್ನುತ್ತಾರೆ. ಪ್ರವಚನಕ್ಕೆ ಸಾವಿರಾರು ವರ್ಷಗಳ ಪರಂಪರೆಯಿದೆ. ಒಂದು ಪ್ರವಚನ ನೂರು ಪೊಲೀಸ್ ಠಾಣೆಗೆ ಸಮಾನ ಎಂದು ಹುಬ್ಬಳ್ಳಿಯ ಮೂರು ಸಾವಿರ ಮಠದ ರಾಜಯೋಗಿಂದ್ರ ಮಹಾಸ್ವಾಮಿಗಳು ಹೇಳಿದರು.
ಜಮಖಂಡಿ ನಗರದ ಐತಿಹಾಸಿಕ ಓಲೇಮಠದ ಆಶ್ರಯದಲ್ಲಿ ಬಸವ ಜಯಂತಿ ನಿಮಿತ್ತ ಏ.15 ರಿಂದ ಏ.29 ರವರೆಗೆ ಹಮ್ಮಿಕೊಂಡಿರುವ ಶರಣರ ವಚನ ಪ್ರವಚನ ಮತ್ತು ಸದ್ಭಾವನಾ ಪಾದಯಾತ್ರೆ ಅಂಗವಾಗಿ ಹನ್ನೊಂದನೆ ದಿನವಾದ ಶುಕ್ರವಾರ ಸಂಜೆ ನಡೆದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಕಿವಿಗಳು ಒಳ್ಳೆಯದನ್ನು ಕೇಳುವಂತಾಗಲಿ, ಅನುಭಾವದ ನುಡಿ ಕಿವಿಗಳಿಗೆ ಬೀಳುವ ಶಬ್ದಕ್ಕೆ ಸೂತಕವಿಲ್ಲ. ಒಳ್ಳೆಯ ಮಾತು, ಶಬ್ದ ಸೂತಕವಿಲ್ಲದ್ದು. ನೈತಿಕವಾಗಿ ಉನ್ನತ ಮಟ್ಟಕ್ಕೆ ಒಯ್ಯುವ ಶಕ್ತಿ ಪ್ರವಚನಕ್ಕಿದೆ. ಪ್ರವಚನದಿಂದ ಮನಸ್ಸು ಸಾತ್ವಿಕವಾಗುತ್ತದೆ, ಭಾವನೆ ಶುದ್ಧಗೊಳ್ಳುತ್ತದೆ. ಪ್ರವಚನ ಕೇಳಿ ಸುಳ್ಳರು ಸುಳ್ಳು ಹೇಳುವುದನ್ನು ಹಾಗೂ ಕಳ್ಳರು ಕಳ್ಳತನ ಮಾಡುವುದನ್ನು ಬಿಟ್ಟಿದ್ದಾರೆ ಎಂದು ಆಶೀರ್ವಚನ ನೀಡಿದರು.
ಪ್ರವಚನದಿಂದ ಏಕಾಗ್ರತೆ ಸಂಪಾದಿಸಬಹುದು. ಪ್ರವಚನ ಶಾಂತಿಯನ್ನು ನೀಡುತ್ತದೆ. ಪ್ರವಚನ ಒಳ್ಳೆಯ ಸಂಸ್ಕಾರ ಕೊಡುತ್ತದೆ. ಮಠಾಧಿಪತಿಗಳು ಸದಾಕಾಲ ಪ್ರವಚನ ಹೇಳುತ್ತ ಸಮಾಜವನ್ನು ಸನ್ಮಾರ್ಗದಲ್ಲಿ ಕೊಂಡ್ಯೊಯುತ್ತಾರೆ ಎಂದರು.
ಧಾರವಾಡದ ಮುರುಘಾ ಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮಾತನಾಡಿ, ಕಡೆಗೀಲಿಲ್ಲದ ಬಂಡಿ ಗುರಿ ಮುಟ್ಟುವುದಿಲ್ಲ. ಶರೀರ ಕೂಡ ಭಗವಂತ ನಿರ್ಮಿಸಿದ ಬಂಡಿಯಾಗಿದೆ. ಶರೀರವೆಂಬ ಬಂಡಿ ಬಂದ ಸ್ಥಳವನ್ನು ತಲುಪಬೇಕಾಗಿದೆ. ಅಧ್ಯಾತ್ಮ, ಅನುಭವ, ಶರಣ ಸಾಹಿತ್ಯ ಎಂಬ ಕೀಲು ಅಗತ್ಯ. ಭಗವಂತನ ಪಾದವನ್ನು ಸರಾಗವಾಗಿ ಸೇರಲು ವಚನ ಪ್ರವಚನ, ಶರಣರ ವಚನ ಪ್ರವಚನ ತುಂಬಾ ಅಗತ್ಯವಿದೆ ಎಂದು ಹೇಳಿದರು.
ಓಲೇಮಠದ ಆನಂದ ದೇವರು ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಪ್ರೊ.ಬಸವರಾಜ ಕಡ್ಡಿ, ಛಾಯಾ ಘೋರ್ಪಡೆ ಇದ್ದರು.

