ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರವು ಬಸವೇಶ್ವರ ಜಯಂತಿ ಉತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಏ.28 ರಿಂದ 30 ರ ವರಗೆ ಪಟ್ಟಣದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದೆ.
ಏ.28 ರಂದು ಬೆಳಗ್ಗೆ 7 ಗಂಟೆಗೆ ಬಸವೇಶ್ವರ ದೇವಸ್ಥಾನದಲ್ಲಿ ಶಿವಭಜನೆ ಆರಂಭವಾಗುವುದು. ಏ.29 ರಂದು ರಾತ್ರಿ 9-30 ಗಂಟೆಗೆ ಸಾಲೋಟಗಿಯ ಶಿವಯೋಗೇಶ್ವರ ಭಜನಾ ಸಂಘ ಹಾಗೂ ಹತ್ತಳ್ಳಿಯ ಗುರುಪಾದೇಶ್ವರ ಭಜನಾ ಸಂಘದವರಿಂದ ಭಜನಾ ಪದಗಳ ಕಾರ್ಯಕ್ರಮ ನಡೆಯುವುದು.
ಏ.30 ರಂದು ಬೆಳಗ್ಗೆ 7 ಗಂಟೆಗೆ ಬಸವೇಶ್ವರ ಭಾವಚಿತ್ರದ ಮೆರವಣಿಗೆ ವಿರಕ್ತಮಠದಿಂದ ಬಸವೇಶ್ವರ ದೇವಸ್ಥಾನದ ವರೆಗೆ ನಡೆಯಲಿದೆ. ಮೆರವಣಿಗೆ ದೇವಸ್ಥಾನಕ್ಕೆ ಆಗಮಿಸಿದ ನಂತರ ಬೆಳಗ್ಗೆ 7-30ಕ್ಕೆ ಶ್ರೀಗಳಿಂದ ಷಟಸ್ಥಲ ಧ್ವಜಾರೋಹಣ ನೆರವೇರುವುದು. ಬೆಳಗ್ಗೆ 10-30 ಗಂಟೆಗೆ ಬಸವಜನ್ಮ ಸ್ಮಾರಕದಲ್ಲಿ ಬಾಲಬಸವೇಶ್ವರ ತೊಟ್ಟಿಲು ಕಾರ್ಯಕ್ರಮ ಹಾಗೂ ನಾಮಕರಣ ನಡೆಯಲಿದೆ. ಸಂಜೆ 5 ಗಂಟೆಗೆ ದೇವಸ್ಥಾನದ ಆವರಣದಲ್ಲಿ ವಚನ ಚಿಂತನ ಕಾರ್ಯಕ್ರಮ ನಡೆಯಲಿದೆ. ಸಿದ್ಧಲಿಂಗ ಸ್ವಾಮೀಜಿ, ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸುವರು. ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು. ದೇವರಹಿಪ್ಪರಗಿ ಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ, ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಮುಖ್ಯ ಅತಿಥಿಗಳಾಗಿ, ಜಿಲ್ಲಾಧಿಕಾರಿ, ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರದ ವಿಶೇಷಾಧಿಕಾರಿ ಟಿ.ಭೂಬಾಲನ್, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ, ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ವಿಶೇಷ ಆಹ್ವಾನಿತರಾಗಿ ಆಗಮಿಸುವರು. ತಾಳಿಕೋಟೆಯ ಜೆ.ಎಸ್.ಜಿ ಪೌಂಡೇಶನ್ ಕಾರ್ಯದರ್ಶಿ ಶ್ರೀಕಾಂತ ಪತ್ತಾರ ಉಪನ್ಯಾಸ ನೀಡುವರು. ರಾತ್ರಿ 9-30 ಗಂಟೆಗೆ ಬಸವೇಶ್ವರರ ಪಲ್ಲಕ್ಕಿ ಉತ್ಸವ ಹಾಗೂ ಭಾವಚಿತ್ರದ ಮೆರವಣಿಗೆ ನಡೆಯಲಿದೆ ಎಂದು ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರದ ಆಯಕ್ತ ಮಹಾದೇವ ಮುರಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
