ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಬಸವ ಜಯಂತಿಯಂದು ರೇಣುಕ ಜಯಂತಿಯನ್ನು ಆಚರಿಸಲು ಹೊರಟಿರುವ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ ಬಿದರಿ ಅವರ ನಿಲುವು ಸರಿಯಾದ ಕ್ರಮವಲ್ಲ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕು ಕಾರ್ಯಾಧ್ಯಕ್ಷ ವಿವೇಕಾನಂದ ಕಲ್ಯಾಣಶೆಟ್ಟಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಬಸವಣ್ಣನವರು ಲಿಂಗಾಯಿತ ಧರ್ಮ ಸಂಸ್ಥಾಪಕರಾಗಿದ್ದು, ಬಸವಣ್ಣನ ವಿಚಾರಗಳೇ ಬೇರೆ ರೇಣುಕರ ವಿಚಾರಗಳೇ ಬೇರೆಯಾಗಿವೆ. ಬಸವ ಜಯಂತಿಯಂದು ಬಸವಣ್ಣನ ವಿಚಾರಗಳು ಜನಮನಕ್ಕೆ ಮುಟ್ಟಬೇಕು. ಸಾಂಸ್ಕೃತಿಕ ನಾಯಕ ಬಸವಣ್ಣನ ವಿಚಾರಗಳಿಗೆ ಮೆರಗು ಬರಬೇಕಾದರೆ ಬಸವ ಜಯಂತಿಯ ಬಸವಣ್ಣನವರ ವಿಚಾರಗಳಿಗೆ ಹೆಚ್ಚು ಹೊತ್ತು ಕೊಡಬೇಕಾಗುತ್ತದೆ. ಅನಾವಶ್ಯಕವಾಗಿ ವೀರಶೈವ ಲಿಂಗಾಯತ ಮಹಾಸಭೆ ಸಮಾಜದಲ್ಲಿ ಗೊಂದಲ ಮೂಡಿಸುವ ಕೆಲಸವನ್ನು ಮಾಡಬಾರದು. ಈ ನಿಟ್ಟಿನಲ್ಲಿ ನಾಡಿನ ಮಠಾಧೀಶರು ವೀರಶೈವ ಲಿಂಗಾಯತ ಮಹಾಸಭೆಯವರಿಗೆ ಬುದ್ಧಿ ಹೇಳಬೇಕಾಗಿದ್ದು ಇಂದಿನ ಅನಿವಾರ್ಯತೆಯಾಗಿದೆ. ರೇಣುಕ ಜಯಂತಿಯನ್ನು ಬೇರೆ ದಿನ ಆಚರಿಸಲು ನಮ್ಮದೇನು ತಕರಾರು ಇಲ್ಲ . ವೀರಶೈವ ಲಿಂಗಾಯತ ಸಭೆಯ ಅಧ್ಯಕ್ಷ ಶಂಕರ ಬಿದರಿ ಅವರು ತಮ್ಮ ನಿಲುವಿನಿಂದ ಹಿಂದೆ ಸರಿಯಬೇಕು ಎಂದು ವಿವೇಕಾನಂದ ಕಲ್ಯಾಣಶೆಟ್ಟಿ ತಿಳಿಸಿದ್ದಾರೆ.

