ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಶಿಕ್ಷಣ ಮತ್ತು ಜ್ಞಾನ ಮಾತ್ರ ನಮ್ಮನ್ನು ಬದಲಾಯಿಸಲು ಸಾಧ್ಯ ಎಂದು ಹೇಳಿರುವ ಡಾ. ಬಿ. ಆರ್. ಅಂಬೇಡ್ಕರ್ ಅವರು ಹೇಳಿ ಇಡೀ ಶೋಷಿತ ಸಮಾಜದಲ್ಲಿ ಜಾಗೃತಿಯನ್ನು ಮೂಡಿಸಿದರು ಎಂದು ಖ್ಯಾತ ವಾಗ್ಮಿ ಹಾಗೂ ಶಿಕ್ಷಕ ಬಸವರಾಜ ಹಂಚಲಿ ಹೇಳಿದರು .
ತಾಲೂಕಿನ ಹಂಗರಗಿ ಗ್ರಾಮದಲ್ಲಿ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಶನಿವಾರ ಹಮ್ಮಿಕೊಂಡಿದ್ದ ಡಾ. ಬಿ. ಆರ್. ಅಂಬೇಡ್ಕರ್ ಅವರ 134 ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, 12ನೇ ಶತಮಾನದ ಬಸವಾದಿ ಶರಣರು ಬಸವಣ್ಣನವರ ನೇತೃತ್ವದಲ್ಲಿ ನಡೆಸಿದ ಸಮಾಜ ಪರಿವರ್ತನೆ ಕ್ರಾಂತಿ ನಮಗೆಲ್ಲರಿಗೂ ಸ್ಪೂರ್ತಿಯಾಗಿದೆ. ಅದೇ ನಿಟ್ಟಿನಲ್ಲಿ ಅಂಬೇಡ್ಕರ್ ಅವರು ಶೋಷಣೆ ವಿರುದ್ಧ ನಿರಂತರವಾಗಿ ಹೋರಾಡುತ್ತಾ ಮೌನ ಕಾಂತಿಯನ್ನು ಮಾಡಿದರು ಎಂದು ಹೇಳಿದರು.
ಕಾರ್ಮಿಕರಿಗಾಗಿ ಮಹಿಳೆಯರಿಗಾಗಿ ಕಾರ್ಯನಿರ್ವಹಿಸಿದರು. ಅಪಾರ ಜ್ಞಾನವನ್ನು ಹೊಂದಿದ್ದ ಅವರು ಇಡೀ ಜಗತ್ತಿನಲ್ಲಿ ಅಪರೂಪವಾದ ಸಂವಿಧಾನವನ್ನು ನಮಗೆ ನೀಡಿದರು ಎಂದು ಹೇಳಿದರು.
ಡಾ. ಯುವರಾಜ ಮಾದನಶೆಟ್ಟಿ ಮಾತನಾಡಿ, ಅಂಬೇಡ್ಕರ್ ಅವರು ಯಾವುದೇ ಜನಾಂಗಕ್ಕೆ ಸೀಮಿತವಾದವರಲ್ಲ. ಅವರು ಮನು ಕುಲದ ಆಸ್ತಿಯಾಗಿದ್ದಾರೆ. ಜಗತ್ತಿನಲ್ಲಿ ಅವರಷ್ಟು ಪದವಿಯನ್ನು ಪಡೆದವರು ನಮಗೆ ಇಂದಿಗೂ ಸಿಗುವುದಿಲ್ಲ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಹಂಗರಗಿಯ ಚನ್ನಬಸವೇಶ್ವರ ಪ್ರತಿಷ್ಠಾನದ ಅಧ್ಯಕ್ಷ, ಸಾಹಿತಿ ವಿವೇಕಾನಂದ ಕಲ್ಯಾಣ ಶೆಟ್ಟಿ ಮಾತನಾಡಿ, ಹಂಗರಗಿ ಗ್ರಾಮದ ಯುವಕರು ಡಾ. ಬಿ. ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಮತ್ತೊಬ್ಬರಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.
ನಮಗೆ ಸಾಧ್ಯವಾದಷ್ಟು ಸಮಾಜಕ್ಕೆ ಸಹಾಯ ಮಾಡುವ ಗುಣವನ್ನು ಬೆಳೆಸಿಕೊಳ್ಳುವುದರ ಜೊತೆಗೆ ನೈತಿಕವಾಗಿ ಬದುಕುವುದು ನಾವು ಡಾ. ಬಿ. ಆರ್. ಅಂಬೇಡ್ಕರ್ ಅವರಿಗೆ ಕೊಟ್ಟ ಗೌರವವಾಗುತ್ತದೆ ಎಂದು ಹೇಳಿದರು.
ಶ್ರೀಕಾಂತ ಕೋರಿ, ಚರಲಿಂಗ ಇಂಗಳೇಶ್ವರ ಮಾತನಾಡಿದರು. ಅಧ್ಯಕ್ಷತೆಯನ್ನು ಬಸಪ್ಪ ಚಲವಾದಿ ವಹಿಸಿದ್ದರು.
ನಾನಾಗೌಡ ಪಾಟೀಲ ಹಾಗೂ ರಮೇಶ ಇಂಗಳೇಶ್ವರ ಅಂಬೇಡ್ಕರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದರು. ರಾಮನಗೌಡ ಬಿರಾದಾರ ಹಾಗೂ ರಮೇಶ ಬ. ಇಂಗಳೇಶ್ವರ ಧ್ವಜಾರೋಹಣವನ್ನು ನೆರವೇರಿಸಿದರು.
ವೇದಿಕೆಯಲ್ಲಿ ವಿರುಪಾಕ್ಷಿ ಕೋರಿ, ಶಿವಶಂಕರ ಪಡಶೆಟ್ಟಿ, ಈರಣ್ಣ ಮಸೂತಿ, ಪವಾಡೆಪ್ಪ ಮಾದರ, ಭೀಮಪ್ಪ ಮಾದರ ಪ್ರವೀಣ ಮುಕಾರ್ತಿಹಾಳ, ಮಳಸಿದ್ದಪ್ಪ ಚಲವಾದಿ, ನಿಜಪ್ಪ ಚಲವಾದಿ ಇತರರು ಇದ್ದರು.ನಿಜಪ್ಪ ಚಲವಾದಿ ಸ್ವಾಗತಿಸಿದರು. ಮಂಜುನಾಥ ಹಂಗರಗಿ ನಿರೂಪಿಸಿದರು. ಮಲಕಪ್ಪ ಚಲವಾದಿ ವಂದಿಸಿದರು.

