ಲಿಂ.ಗುರು ಮಹಾಂತೇಶ್ವರ ಸ್ವಾಮೀಜಿ ಪುಣ್ಯಸ್ಮರಣೆಯ ಅಮೃತ ಮಹೋತ್ಸವ | ಗುರು ಮಹಾಂತೇಶ್ವರ ಪುರಾಣ ಮಹಾಮಂಗಲ
ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಇಂದು ವಿದ್ಯಾಭ್ಯಾಸ ಕಡಿಮೆಯಾದರೂ ಪರವಾಗಿಲ್ಲ ಸಂಸ್ಕಾರ ನೀಡುವದು ಬಹಳ ಮುಖ್ಯವಾಗಿದೆ ಎಂದು ಕೆರೂರು ಚರಂತಿಮಠದ ಡಾ.ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಮನಗೂಳಿ ಪಟ್ಟಣದ ಪಟ್ಟೀಕಂಥಿ ಹಿರೇಮಠದ ಲಿಂ.ಗುರು ಮಹಾಂತೇಶ್ವರ ಸ್ವಾಮೀಜಿಯವರ ಪುಣ್ಯಸ್ಮರಣೆಯ ಅಮೃತ ಮಹೋತ್ಸವದಂಗವಾಗಿ ಹಮ್ಮಿಕೊಂಡಿದ್ದ ಗುರು ಮಹಾಂತೇಶ್ವರ ಪುರಾಣ ಮಹಾಮಂಗಲ ಕಾರ್ಯಕ್ರಮದಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ 75 ವಿದ್ಯಾರ್ಥಿಗಳಿಗೆ ಗುರುರಕ್ಷೆ ಮತ್ತು ಧರ್ಮ ಜಾಗೃತಿ ಸಮಾರಂಭದ ಸಮ್ಮುಖ ವಹಿಸಿ ಮಾತನಾಡಿದ ಅವರು, ಇಂದು ವಿದ್ಯಾರ್ಥಿಗಳಲ್ಲಿ ಸಂಸ್ಕಾರ ಕಡಿಮೆಯಾಗುತ್ತಿರುವದು ವಿಷಾದಕರ ಸಂಗತಿ. ಅವರು ಮೊಬೈಲ್ ದಾಸರಾಗಿ ಕಾಲಹರಣ ಮಾಡುತ್ತಿರುವದು ಕಂಡುಬರುತ್ತಿದೆ. ಪಾಲಕರು ಮಕ್ಕಳಿಗೆ ಕಲಿಸಬೇಡಿ. ಅವರು ಕಲಿಯುವಂತೆ ಮಾಡಬೇಕು. ಅವರು ಇಚ್ಛೆ ಪಟ್ಟು ಅಧ್ಯಯನ ಮಾಡಿದಾಗ ಮಾತ್ರ ಅವರು ವಿದ್ಯಾವಂತರಾಗಲು ಸಾಧ್ಯ.ತಂದೆ- ತಾಯಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಜೊತೆಗೆ ಉತ್ತಮ ವಿದ್ಯೆ ಸಿಗುವಂತೆ ಮಾಡಬೇಕೆಂದರು.
ತಂದೆ-ತಾಯಿ ಜೀವಂತ ದೇವರು. ಅವರ ಸೇವೆ ಮಾಡಿದಾಗ ಮಾತ್ರ ಪರಮಾತ್ಮನ ಮೆಚ್ಚುಗೆ ಪಾತ್ರರಾಗಬಹುದು. ಗುರು-ಹಿರಿಯರ ಸೇವೆ ಮಾಡುವದು ಶ್ರೇಷ್ಠ ಎಂದ ಸಂಪತ್ತು ಜನರನ್ನು ಚಿಂತೆಗೀಡು ಮಾಡುತ್ತದೆ. ಸಂಪತ್ತಿನ ಬೆನ್ನು ಹತ್ತಬಾರದು ಎಂದರು.
ಸಾನಿಧ್ಯ ವಹಿಸಿದ್ದ ಸಿಂದಗಿಯ ಡಾ.ಪ್ರಭುಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಗುರುವಿನ ಕೃಪೆ ಎಲ್ಲರಿಗೂ ಸಿಗುವುದಿಲ್ಲ. ಅದನ್ನು ಸಂಕಲ್ಪ ಮಾಡಿಕೊಂಡು ಪಡೆಯಬೇಕು. ಕಿಂಕರ ಭಾವದಲ್ಲಿ ಶಂಕರ ಭಾವವಿದೆ. ಇಲ್ಲಿನ ಶ್ರೀಮಠದ ಪ್ರಸ್ತುತ ಶ್ರೀಗಳು ಗುರುವಿನಂತೆ ಶ್ರೀಮಠವನ್ನು ಬೆಳಗುತ್ತಿದ್ದಾರೆ. ಗುರುವಿನ ಪುಣ್ಯಸ್ಮರಣೋತ್ಸವದಂಗವಾಗಿ ೭೫ ವಿದ್ಯಾರ್ಥಿಗಳಿಗೆ ಶಾಲಾ ಪರಿಕರಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೇರಣೆ ನೀಡುತ್ತಿರುವುದು ಶ್ಲಾಘನೀಯ ಎಂದರು.
ನೇತೃತ್ವ ವಹಿಸಿದ್ದ ಪಟ್ಟೀಕಂಥಿ ಹಿರೇಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಭಾರತೀಯ ಸಂಸ್ಕ್ರತಿಗೆ ವಿಜಯಪುರ ಜಿಲ್ಲೆಯ ಕೊಡುಗೆಯು ಅನುಪಮವಾಗಿದೆ ಎಂದರು.
ಗುಳೇದಗುಡ್ಡ ಅಮರೇಶ್ವರಮಠದ ಡಾ.ನೀಲಕಂಠ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬೃಂಗೀಶ್ವರಲಿಂಗ ಶಿವಾಚಾರ್ಯ ಸ್ವಾಮೀಜಿ, ಅಶೋಕ ವಾರದ, ಸುಭಾಸಗೌಡ ಪಾಟೀಲ, ವಿಶ್ವನಾಥಗೌಡ ಪಾಟೀಲ, ರಾಜಶೇಖರ ಮಗಿಮಠ, ಎಸ್.ಎಸ್.ಗೊಳಸಂಗಿಮಠ, ಗುರು ಗಚ್ಚಿನಮಠ, ಅಪ್ಪುಗೌಡ ಪಾಟೀಲ, ಚಂದ್ರಶೇಖರಗೌಡ ಪಾಟೀಲ, ಸಾಯಿರಾಂ ಯಾದವಾಡ ಸೇರಿದಂತೆ ಇತರರು ಇದ್ದರು. ಮಡಿವಾಳಯ್ಯ ಶಾಸೀಜಿ ಸ್ವಾಗತಿಸಿ,ನಿರೂಪಿಸಿದರು. ಇದೇ ಸಂದರ್ಭದಲ್ಲಿ ೭೫ ವಿದ್ಯಾರ್ಥಿಗಳಿಗೆ ಶಾಲಾ ಪರಿಕರಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಗುರುರಕ್ಷೆ ನೀಡಲಾಯಿತು.
ಡಾ.ಮಹಾಂತಲಿಂಗ ಶ್ರೀ ಪೀಠಾರೋಹಣ
ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿಯವರು ಎಲ್ಲ ಶ್ರೀಗಳ, ಗಣ್ಯರ ಸಮ್ಮುಖದಲ್ಲಿ ಭಕ್ತರ ಜಯಘೋಷದೊಂದಿಗೆ ಪೀಠಾರೋಹಣ ಮಾಡಿದರು. ನಂತರ ಶ್ರೀಗಳಿಗೆ ಭಕ್ತರಿಂದ ನಾಣ್ಯಗಳಿಂದ, ಓಂ ನಮಃ ಶಿವಾಯ ಎಂಬ ಮಂತ್ರ ಬರೆದ ೫೦೦ ಕ್ಕೂ ಹೆಚ್ಚಿನ ಪುಸ್ತಕಗಳಿಂದ ಮಂತ್ರ ತುಲಾಭಾರ ನಡೆಯಿತು.
ರಜತ ಮೂರ್ತಿಗಳ ಅಡ್ಡಪಲ್ಲಕ್ಕಿ ಮಹೋತ್ಸವ
ಕಾರ್ಯಕ್ರಮಕ್ಕೂ ಮುನ್ನ ಗುರು ಮಹಾಂತೇಶ್ವರರ ಹಾಗೂ ಗುರು ಸಂಗನಬಸವ ಶಿವಾಚಾರ್ಯರ ರಜತ ಮೂರ್ತಿಗಳ ಅಡ್ಡಪಲ್ಲಕ್ಕಿ ಮಹೋತ್ಸವ ವಿವಿಧ ಜಾನಪದ ಕಲಾತಂಡಗಳ, ಸಕಲ ವಾದ್ಯ ವೈಭವದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜರುಗಿತು.

