ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಭೌತಿಕ ಸಂಪತ್ತಿಗಿಂತ ವಿದ್ಯಾ ಸಂಪತ್ತು ಬಹು ದೊಡ್ಡ ಆಸ್ತಿ. ಹಾಗಾಗಿ ಬದುಕಿನಲ್ಲಿ ವಿದ್ಯೆ ಸಂಪಾದನೆಗೆ ಹೆಚ್ಚಿನ ಮಹತ್ವ ಕೊಡಬೇಕು ಎಂದು ಮಾಜಿ ವಿಪ ಸದಸ್ಯ ಅರುಣ ಶಹಾಪುರ ಹೇಳಿದರು.
ಇತ್ತೀಚಗೆ ಪ್ರಕಟಗೊಂಡ ಯುಪಿಎಸ್‌ಸಿ ಪರೀಕ್ಷೆಯ ಫಲಿತಾಂಶದಲ್ಲಿ ಮುದ್ದೇಬಿಹಾಳ ತಾಲೂಕು ಮಡಿಕೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಮತ್ತು ಸಿಂದಗಿಯ ಡಾ.ಮಹೇಶ ಮಡಿವಾಳರ ೪೮೨ನೇ ರ‍್ಯಾಂಕ್ ಪಡೆದುಕೊಂಡ ದಿಸೆಯಲ್ಲಿ ಅವರ ಮನೆಗೆ ತೆರಳಿ ಸನ್ಮಾನಿಸಿ ಗೌರವಿಸಿ ಮಾತನಾಡಿದ ಅವರು, ಇಂದಿನ ಯುವ ಜನಾಂಗ ಸಾಧನೆಯೆಡೆಗೆ ಮುಖ ಮಾಡುತ್ತಿಲ್ಲ. ತಂದೆ-ತಾಯಿಘಲು ಮಕ್ಕಳ ಅಧ್ಯಯನಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡುತ್ತಿದ್ದಾರೆ. ಆದರೆ ಮಕ್ಕಳು ಪಾಲಕರ ಸಂಕಷ್ಟಗಳನ್ನು ನೋಡುತ್ತಿಲ್ಲ. ಆದರೆ ಡಾ.ಮಹೇಶ ಅವರು ಪ್ರಾಥಮಿಕ, ಪ್ರೌಢ, ಪಪೂ, ಉನ್ನತ ಶಿಕ್ಷಣ ಸರ್ಕಾರಿ ಸಂಸ್ಥೆಗಳಲ್ಲಿ ಪೂರ್ಣಗೊಳಿಸಿ ಈ ಸಾಧನೆ ಮಾಡಿದ್ದಾರೆ. ತಾಯಿ ಯಮುನಾಬಾಯಿ ಮಡಿವಾಳರ ಅವರ ಪರಿಶ್ರಮದ ಫಲ, ಮಹೇಶ ಅವರ ಕಠಿಣ ಪ್ರಯತ್ನ ಈ ಯಶಸ್ಸಿಗೆ ಕಾರಣ ಎಂದರು.
ಈ ವೇಳೆ ಶ್ರೀ ಗಣೇಶ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ಸಿಂದಗಿಯ ಉಪಾಧ್ಯಕ್ಷ ಶಿವಾನಂದ ರೋಡಗಿ, ನಿರ್ದೇಶಕ ಭೀಮಾಶಂಕರ ತಾರಾಪೂರ, ಮಲ್ಲಿಕಾರ್ಜುನ ಅಲ್ಲಾಪೂರ, ಮಲ್ಲಿಕಾರ್ಜುನ ಅಗಸರ, ಬಸವರಾಜ ಬಿರಾದಾರ ಶಿವಾನಂದ ಶಹಾಪುರ, ಬಸವರಾಜ ಭೂತಿ, ಸುಭಾಸ ಅರಳಗುಂಡಿಗಿ ಇದ್ದರು.

