ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ಗ್ರಾಮದ ಪಶು ಚಿಕಿತ್ಸಾಲಯದಲ್ಲಿ ಏಳನೇ ಸುತ್ತಿನ ಕಾಲು ಮತ್ತು ಬಾಯಿ ರೋಗಗಳಿಗೆ ವಿಶೇಷ ಚಿಕಿತ್ಸೆ ನೀಡುವ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಏ. ೨೬ ರಿಂದ ಜೂನ್ ೬ ರವರೆಗೆ ಸತತವಾಗಿ ನಡೆಯಲಿರುವ ಈ ಲಸಿಕಾ ಅಭಿಯಾನದಲ್ಲಿ ಚಿಮ್ಮಡ ಹಾಗೂ ಯರಗಟ್ಟಿ ಗ್ರಾಮಗಳ ಸುಮಾರು ೬೫೦೦ ಜಾನುವಾರುಗಳಿಗೆ ಕಾಲು ಮತ್ತು ಬಾಯಿ ರೋಗನಿರೋಧಕ ಲಸಿಕೆಗಳನ್ನು ನೀಡುವ ಗುರಿ ನಿಗದಿಪಡಿಸಿಕೊಳ್ಳಲಾಗಿದ್ದು ಗ್ರಾಮದ ರೈತರು, ಸಾರ್ವಜನಿಕರು ಪಶು ಚಿಕಿತ್ಸಾಲಯಕ್ಕೆ ಬಂದು ತಮ್ಮ ಸಾಕುಪ್ರಾಣಿ ಹಾಗೂ ಜಾನುವಾರುಗಳಿಗೆ ಲಸಿಕೆ ಹಾಕಿಸುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ವೈದ್ಯಾಧಿಕಾರಿ ಡಾ. ರೂಪಾ ಕಡಸಾನಿ ಮನವಿ ಮಾಡಿದ್ದಾರೆ. ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಬಂಗಾರೆವ್ವ ಜಾಲಿಕಟ್ಟಿ ಕಾರ್ಯಕ್ರಮದ ಭಿತ್ತಿಪತ್ರ ಪ್ರದರ್ಶೀಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಮಾಜಿ ಅಧ್ಯಕ್ಷ ಆನಂದ ಕವಟಿ, ಪ್ರಭು ಮುಧೋಳ, ಬಾಳು ಬ್ಯಾಕೋಡ, ಸುರೇಶ ಪೂಜಾರಿ, ತುಕಾರಾಮ ದೊಡಮನಿ, ಪಶು ವೈದ್ಯ ಪರೀಕ್ಷಕ ಎಸ್.ಕೆ. ಕೋರಿ, ಉಮೇಶ ಸವದಿ, ಪಶು ಸಖಿ ಸುನಿತಾ ಕೋಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

