ಎಸ್ಪಿ ಲಕ್ಷ್ಮಣ ನಿಂಬರಗಿ ನೇತೃತ್ವ | ಅಪರಾಧದ ವಿರುದ್ಧ ಆರಕ್ಷಕರ ಕಾರ್ಯಾಚರಣೆ | ವರ್ಷದಲ್ಲಿ ೩೪೫ ಆರೋಪಿಗಳ ಬಂಧನ | ೭,೦೨,೨೯,೭೬೪ ರೂ. ಮೌಲ್ಯದ ವಸ್ತುಗಳು ವಶ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಅಪರಾಧಿಕ ಪ್ರಕರಣಗಳ ಕಡಿವಾಣಕ್ಕೆ ವಿಜಯಪುರ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ನೇತೃತ್ವದಲ್ಲಿ ಪೊಲೀಸ್ ಇಲಾಖೆ ಟೊಂಕಕಟ್ಟಿ ನಿಂತಿದ್ದು, ಕಳೆದ ಒಂದು ವರ್ಷದ ಅವಧಿಯಲ್ಲಿ ಅನೇಕ ಆರೋಪಿಗಳನ್ನು ಬಂಧಿಸಿ ಕೋಟ್ಯಂತರ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಕಳ್ಳತನ ಮೊದಲಾದ ಪ್ರಕರಣಗಳಲ್ಲಿ ತಮ್ಮ ಸ್ವೊತ್ತನ್ನು ಕಳೆದುಕೊಂಡಿರುವ ನೈಜ ವಾರಸುದಾರರಿಗೆ ಶುಕ್ರವಾರ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಗಳು ಸ್ವೊತ್ತನ್ನು ಹಸ್ತಾಂತರಿಸಿದರು.
ಒಟ್ಟು ೭,೦೨,೨೯,೭೬೪ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದು ವಾರಸುದಾರರಿಗೆ ೩,೪೬,೦೮,೧೦೦ ರೂ. ಮೌಲ್ಯದ ವಸ್ತುಗಳನ್ನು ಹಿಂದಿರುಗಿಸಲಾಗುತ್ತಿದೆ. ಬಾಕಿ ಉಳಿದ ೩,೫೬,೨೧,೬೬೪ ರೂ. ಮೌಲ್ಯದ ವಸ್ತುಗಳನ್ನು ನ್ಯಾಯಾಲಯದಿಂದ ಅನುಮತಿ ಆಧರಿಸಿ ವಾರಸುದಾರರಿಗೆ ನೀಡುವ ವ್ಯವಸ್ಥೆ ಮಾಡಲಿದೆ.
ಈ ಕುರಿತು ವಿವರಣೆ ನೀಡಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ, ೨೦೨೪ ಹಾಗೂ ೨೦೨೫ ನೇ ವರ್ಷದ ಅವಧಿಯಲ್ಲಿ ಪೊಲೀಸ್ ಇಲಾಖೆ ೨೨೫ ಪ್ರಕರಣಗಳನ್ನು ಪತ್ತೆ ಮಾಡಿದ್ದು, ಒಟ್ಟು ೩೪೫ ಆರೋಪಿತರನ್ನು ದಸ್ತಗಿರಿ ಮಾಡಿ ಆರೋಪಿತರಿಂದ ಕೋಟ್ಯಂತರ ರೂ. ಮೌಲ್ಯದ ವಸ್ತುಗಳನ್ನು ಜಪ್ತು ಮಾಡಿಕೊಳ್ಳಲಾಗಿದೆ.
ಬಂಗಾರ – ಬೆಳ್ಳಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ೯೨ ಪ್ರಕರಣಗಳಿಗೆ ಸಂಬಂಧಿಸಿದಂತೆ ೧೫೨ ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳಿಂದ ೨,೩೯,೮೫,೧೧೦ ರೂ. ಮೌಲ್ಯದ ೫೧೪೫.೦೨ ಗ್ರಾಂ ಬಂಗಾರ ಹಾಗೂ ೧೭೨೩ ಗ್ರಾಂ ಬೆಳ್ಳಿ ಆಭರಣಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ದ್ವೀ-ಚಕ್ರ ವಾಹನ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ೭೩ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದ ಪೊಲೀಸ್ ಇಲಾಖೆ ಈ ತೆರನಾದ ಪ್ರಕರಣದಲ್ಲಿ ೧೦೨ ಆರೋಪಿಗಳನ್ನು ಬಂಧಿಸಿದ್ದು, ೧,೦೬,೭೨,೦೦೦ ರೂ. ಮೌಲ್ಯದ ೨೫೧ ವಿವಿಧ ಕಂಪನಿಯ ದ್ವೀ-ಚಕ್ರ ವಾಹನಗಳನ್ನು ಜಪ್ತಿ ಮಾಡಿಕೊಂಡಿದೆ ಎಂದರು.
ವಿವಿಧ ಕಾರ್ ಕಳ್ಳತನ ಪ್ರಕರಣಗಳನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಈ ವರ್ಷದಲ್ಲಿ ಒಟ್ಟು ೧೪ ಕಾರು ಕಳ್ಳತನ ಪ್ರಕರಣ ದಾಖಲಿಸಿಕೊಂಡಿದ್ದು, ೧,೩೨,೪೧,೦೦೦ ರೂ. ಮೌಲ್ಯದ ೧೨ ಕಾರುಗಳನ್ನು ಜಪ್ತು ಮಾಡಿಕೊಳ್ಳಲಾಗಿದೆ.
ಟಿಪ್ಪರ್ ಕಳ್ಳತನ ಪ್ರಕರಣವನ್ನು ಇಲಾಖೆ ಬೇಧಿಸಿದ್ದು ೧೯ ಲಕ್ಷ ರೂ. ಮೌಲ್ಯದ ಎರಡು ಟಿಪ್ಪರ್‌ಗಳನ್ನು ಜಪ್ತು ಮಾಡಲಾಗಿದ್ದು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ವಿವರಿಸಿದರು.
ನಗದು ಕಳ್ಳತನ ದಾಖಲಾಗಿದ್ದ ೧೯ ಪ್ರಕರಣಗಳ ಪೈಕಿ ೩೧ ಆರೋಪಿಗಳನ್ನು ಬಂಧಿಸಿ ೧,೯೧,೮೯,೪೦೪ ರೂ. ನಗದು ಹಣವನ್ನು ಇಲಾಖೆ ಜಪ್ತು ಮಾಡಿಕೊಂಡಿದೆ ಎಂದು ವಿವರಿಸಿದರು.

