ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್ ರಾಮ್ ಅವರ ಆದರ್ಶಗಳು ಮತ್ತು ಚಿಂತನೆಗಳು ಎಲ್ಲಾ ಕಾಲಕ್ಕೂ ಮಾದರಿಯಾಗಿವೆ. ಅವರ ವ್ಯಕ್ತಿತ್ವ ಹಾಗೂ ನಡೆದು ಬಂದ ಜೀವನ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ ಎಂದು ಮಾದಿಗ ಯುವ ಸೇನೆಯ ಅಧ್ಯಕ್ಷ ನಂದಕುಮಾರ್ ಬಾಂಬೆಕರ್ ಹೇಳಿದರು.
ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ ಡಾ ಬಿ ಆರ್ ಅಂಬೇಡ್ಕರ್, ಬಾಬು ಜಗಜೀವನರಾಮ್ ಜಯಂತ್ಯೋತ್ಸವ ಮತ್ತು ಮಾದಿಗ ಯುವ ಸೈನ್ಯ ಶಾಖೆ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾದಿಗ ಸಮಾಜವು ಶತಮಾನಗಳಿಂದಲೂ, ಶೋಷಣೆ ದಬ್ಬಾಳಿಕೆಯಿಂದ ನಲುಗಿದೆ. ಆದರೆ ಯಾರೂ ಮಾದಿಗರ ನ್ಯಾಯಯುತ ಬೇಡಿಕೆಯಾದ ಒಳ ಮೀಸಲಾತಿ ಕೊಡಿಸಲು ವಿಫಲರಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಾದಿಗ ಯುವ ಮುಖಂಡ ಸಾಯಬಣ್ಣ ಪುರದಾಳ, ಬಾಬು ಜಗಜೀವನ್ ರಾಮ್ ಅವರು ಸ್ವಾತಂತ್ರ್ಯ ನಂತರ ಕೃಷಿ ಸಚಿವರಾಗಿ ಬಡ ರೈತರ ಬಾಳಿಗೆ ಬೆಳಕಾಗಿ ಹಸಿರು ಕ್ರಾಂತಿಯನ್ನೇ ಮಾಡಿ ಈ ದೇಶಕ್ಕೆ ಆಹಾರ ಭದ್ರತೆಯನ್ನು ನೀಡಿದವರು. ಅವರ ಸಾಮಾಜಿಕ ಕಳಕಳಿ ಹಾಗೂ ರಾಜಕೀಯ ಮುನ್ನೋಟಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.
ಸಾನಿಧ್ಯ ವಹಿಸಿದ ಸಿದ್ದಬಸ್ವ ಕಬೀರ್ ಶ್ರೀಗಳು ಮಾತನಾಡಿ, ಒಡೆದು ಆಳುವ ಮನೋಭಾವದ ಮನಸ್ಥಿತಿಗಳ ಮಧ್ಯೆ ಈ ಎರಡು ಮಹಾಪುರುಷರ ಜಯಂತಿಯನ್ನು ಒಟ್ಟಿಗೆ ಆಚರಿಸುತ್ತಿರುವುದು ಈ ನಾಡಿಗೆ ಒಂದು ಮೇಲ್ಪಂಕ್ತಿಯಾಗಿದೆ ಎಂದರು.
ಡಾ ಬಾಬೂಜಿ ಮತ್ತು ಡಾ ಬಾಬಾಸಾಹೇಬ್ ಅವರ ಭವ್ಯವಾದ ಮೆರವಣಿಗೆಗೆ ಚಾಲನೆ ನೀಡಿದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಯಸ್ಮಿನ್ ಬಾನು ನಾಯ್ಕೋಡಿ ಮತ್ತು ರುದ್ರಣ್ಣ ಮಾನ ಶೆಟ್ಟಿಯವರು ಚಾಲನೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ, ರಮೇಶ ಬೂಸನೂರ ಅವರು, ಈ ಸಮಾಜವು ಮುನ್ನಲೆಗೆ ಬರಲು ಸಾಮಾಜಿಕ, ಶೈಕ್ಷಣಿಕವಾಗಿ ಜಾಗೃತರಾಗಿರಬೇಕು ಎಂದು ಸಲಹೆ ನೀಡಿದರು.
ವೇದಿಕೆ ಮೇಲೆ ಸಂತೋಷ್ ಗೌಡ ಪಾಟೀಲ, ವಿಜುಗೌಡ ಬಿರಾದಾರ,ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ದಸ್ತಗಿರ್ ಸಾಬ್ ಮುಲ್ಲಾ, ಯಂಕನಗೌಡ ಪಾಟೀಲ್, ಶ್ರೀಶೈಲ್ ಶಳ್ಳಗಿ, ಪ್ರಕಾಶ್ ಯಡ್ರಾಮಿ, ಬಸನಗೌಡ ಕುಂಟೋಜಿ, ಬಸವರಾಜ್ ಕಾಟಿ, ದಸ್ತಗಿರ್ ಅಗಸಿಮನಿ, ದೊಡ್ಡಪ್ಪ ಚಲವಾದಿ, ರಾಜು ಶಿ ಕೆ, ಡಾ ನ್ಯಾಚುರದ್ದೀನ್ ನಾಯ್ಕೋಡಿ, ಏಕನಾಥ್ ದ್ಯೋಶಲ್, ಯಲ್ಲು ಇಂಗಳಗಿ, ರಮೇಶ್ ಗುಬ್ಬೆವಾಡ, ರಾಜು ಗುಬ್ಬೇವಾಡ, ಸಿದ್ದು ಪೂಜಾರಿ, ರವಿ ಮೂಲಿಮನಿ, ನಿತ್ಯಾನಂದ, ಖಾಜು ಬಂಕಲಗಿ, ಶಿವು ದೇವಟಗಿ ಮುಂತಾದವರು ಉಪಸ್ಥಿತರಿದ್ದರು.

