ಉದಯರಶ್ಮಿ ದಿನಪತ್ರಿಕೆ
ಇಂಡಿ: ಯುವನಿಧಿ ಯೋಜನೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಇದು ನಮ್ಮ ರಾಜ್ಯದ ಯುವಕರಿಗೆ ಆತ್ಮವಿಶ್ವಾಸ ಹಾಗೂ ಆರ್ಥಿಕ ನೆರವನ್ನು ನೀಡುವ ಉದ್ದೇಶವಿರುವ ಯೋಜನೆ ಎಂದು ಗ್ಯಾರಂಟಿ ಯೋಜನೆಯ ಜಿಲ್ಲಾಧ್ಯಕ್ಷ ಇಲಿಯಾಸ ಬೋರಾಮಣಿ ಹೇಳಿದರು.
ಪಟ್ಟಣದ ಜಿ.ಆರ್. ಗಾಂಧಿ ಕಲಾ, ವಾಯ್.ಎ.ಪಾಟೀಲ ವಾಣಿಜ್ಯ ಹಾಗೂ ಎಮ್.ಪಿ.ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದ ಮತ್ತು ನೇಮಕಾತಿ ಘಟಕ ಮತ್ತು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಮತ್ತು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ವಿಜಯಪುರ ಇವರ ಸಹಯೋಗದೊಂದಿಗೆ ಯುವನಿಧಿ ಬಗ್ಗೆ ಜಾಗೃತಿ ಕಾರ್ಯಕ್ರಮ ಜರುಗಿತು.
ಪದವಿ ಅಥವಾ ಡಿಪ್ಲೊಮಾ ಪೂರೈಸಿದ ನಂತರ ಉದ್ಯೋಗವಿಲ್ಲದೆ ಇರುವ ಅರ್ಹ ಅಭ್ಯರ್ಥಿಗಳಿಗೆ ನಿರ್ದಿಷ್ಟ ಸಮಯದವರೆಗೆ ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ. ಇದು ತಮ್ಮ ಮುಂದಿನ ಉದ್ಯೋಗ ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳ ಪಠಣೆಗೆ ಸಹಾಯವಾಗಲಿದೆ. ಈ ಯೋಜನೆಯ ಉದ್ದೇಶ ಮಾತ್ರ ಹಣದ ನೆರವು ನೀಡುವುದು ಮಾತ್ರವಲ್ಲ — ಆದರೆ ಯುವಕರಲ್ಲಿ ಮುಂದಿನ ಹೆಜ್ಜೆ ಇಡುವ ಆತ್ಮವಿಶ್ವಾಸ ಹಾಗೂ ಉತ್ಸಾಹ ತುಂಬುವುದು ಕೂಡ. ಇಂತಹ ಯೋಜನೆಗಳ ಮೂಲಕ ಸರ್ಕಾರವು ಯುವಶಕ್ತಿಗೆ ಸ್ಪಷ್ಟ ಗುರಿ, ಮಾರ್ಗದರ್ಶನ ಹಾಗೂ ನಂಬಿಕೆ ನೀಡಲು ಮುಂದಾಗಿದೆ.
ಎಂದರು.
ಇಂಡಿ ತಾಲೂಕಿನ ಪಂಚ ಗ್ಯಾರಂಟಿ ಅಧ್ಯಕ್ಷ ಪ್ರಶಾಂತ ಕಾಳೆ ಮಾತನಾಡಿ, ಯುವನಿಧಿ ಯೋಜನೆಯು ರಾಜ್ಯದ ನಿರುದ್ಯೋಗಿ ಯುವಕರು ಮತ್ತು ಯುವತಿಯರಿಗೆ ಮಾಸಿಕ ಸಹಾಯಧನ ನೀಡುವ ಒಂದು ಯೋಜನೆ. ಈ ಯೋಜನೆಯು ನಿರುದ್ಯೋಗದಿಂದ ತೊಂದರೆಗೀಡಾದವರಿಗೆ ಒಂದು ರೀತಿಯ ಆರ್ಥಿಕ ನೆರವು ನೀಡಿ ಅವರ ಜೀವನದಲ್ಲಿ ಒಂದು ಸಕಾರಾತ್ಮಕ ಬದಲಾವಣೆಯನ್ನು ತರಲು ಸಹಾಯ ಮಾಡುತ್ತದೆ. ಎಂದು ಹೇಳಿದರು.
ಪ್ರಾಚಾರ್ಯ ಡಾ.ಎಸ್.ಬಿ.ಜಾಧವ , ಉಪನ್ಯಾಸಕಿಯಾದ ಶ್ವೇತಾ ಕಾಂತ ಧಾನಮ್ಮ ಪಾಟೀಲ, ಬಿ.ಹೆಚ್.ಬಗಲಿ ಮಾತನಾಡಿದರು.
ಇಒ ನಂದಿಪ ರಾಠೋಡ, ಮಹೇಶ ಮಲವಾಡೇಕರ, ಸೋಮಶೇಖರ ಆಲಮೇಲ, ಇರ್ಫಾನ್ ವಾಹಿದಿ, ಪಂಚ ಗ್ಯಾರಂಟಿ ಸದಸ್ಯರಾದ ಶಶಿಕುಮಾರ ಹಿರೇಮಠ, ಸಿದ್ದು ಕಟ್ಟಿಮನಿ, ಸಂಕೇತ ಬಿ. ಜ್ಯೋಶಿ ಮತ್ತು ಡಾ.ಜಯಪ್ರಸಾದ ಡಿ ಉಪಸ್ಥಿತರಿದ್ದರು.

