ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ನಡೆದ ಕ್ರೂರ ದಾಳಿಯನ್ನು ನಾಗರೀಕ ಸಮಾಜ ತೀವ್ರವಾಗಿ ಖಂಡಿಸಿದ್ದು, ಹೇಯ ಕೃತ್ಯ ಮಾಡಿದವರ ಮೇಲೆ ಕಠಿಣ ಕ್ರಮ ಕೈಕೊಳ್ಳಬೇಕು ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡ ಅಬ್ದುಲ್‌ಹಮೀದ ಮುಶ್ರೀಫ ಆಗ್ರಹಿಸಿದ್ದಾರೆ.
ದೇಶದ ನಾಗರಿಕರ ಮೇಲೆ ನಡೆದ ಈ ದಾಳಿ ದುಃಖಕರ ಹಾಗೂ ಅಮಾನವೀಯವಾದುದು. ಇಸ್ಲಾಂ ಧರ್ಮದ ಮೇಲೆ ನಂಬಿಕೆ ಇಟ್ಟು ಬದುಕುವ ಯಾರೊಬ್ಬರೂ ಭಯೋತ್ಪಾದನೆ ಬೆಂಬಲಿಸುವುದಿಲ್ಲ. ಭಗವಂತನೂ (ಅಲ್ಲಾಹು) ಅಮಾಯಕರ ಹತ್ಯೆ ಸಹಿಸುವುದಿಲ್ಲ.. ಭಯೋತ್ಪಾದನೆ ನಮ್ಮ ನೆಲದಿಂದ ಮಟ್ಟ ಹಾಕಬೇಕಾಗಿದೆ. ಕೇಂದ್ರ ಸರಕಾರ ದಿಟ್ಟ ನಿರ್ಧಾರ ಕೈಕೊಳ್ಳಬೇಕು. ಧರ್ಮಾಧಾರಿತ ಭಯೋತ್ಪಾದನೆ ಸಲ್ಲದು. ದೇಶದ ಪ್ರತಿಯೊಬ್ಬರೂ ಇದನ್ನು ಖಂಡಿಸಬೇಕಾಗಿದೆ. ಜಮ್ಮು ಕಾಶ್ಮೀರದಲ್ಲಿಯೇ ಭಯೋತ್ಪದನಾ ದಾಳಿ ಖಂಡಿಸಿ ಪ್ರತಿಭಟನೆ ನಡೆಯುತ್ತಿರುವುದು ಸಾಕ್ಷಿಯಾಗಿದೆ. ಯಾವ ಧರ್ಮವೂ ಅಮಾಯಕರನ್ನು ಕೊಲ್ಲಬೇಕೆಂದು ಹೇಳುವುದಿಲ್ಲ. ಕೊಲ್ಲುವವರು ಮನುಷ್ಯರೆ ಅಲ್ಲ ಎಂಬುದನ್ನು ನಾವಿಂದು ಅರಿಯಬೇಕಿದೆ. ನಾವೆಲ್ಲ ಸರಕಾರದೊಂದಿಗೆ ನಿಲ್ಲೋಣ ಭಯೋತ್ಪಾದನೆ ತಡೆಗಟ್ಟಲು ಸೂಕ್ತ ಕ್ರಮ ಕೈಕೊಳ್ಳಲು ಸಹಕರಿಸೋಣ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

