ಉದಯರಶ್ಮಿ ದಿನಪತ್ರಿಕೆ
ತಾಳಿಕೋಟೆ: ಪಟ್ಟಣದ ರಾಜವಾಡೆಯಲ್ಲಿರುವ ಪುರಾತನ ಭಾವಿಯಾದ ಭೀಮನಭಾವಿಯನ್ನು ಪುರಸಭೆ ವತಿಯಿಂದ ಶನಿವಾರರಂದು ಸ್ವಚ್ಚತಾ ಕಾರ್ಯವನ್ನು ಆರಂಬಿಸಲಾಯಿತು.
ತಾಳಿಕೋಟೆ ಪಟ್ಟಣದಲ್ಲಿ ಇದೇ ದಿ.೧೭ ರಿಂದ ಪ್ರಾರಂಭಗೊಳ್ಳಲಿರುವ ಶ್ರೀ ಗ್ರಾಮದೇವತೆ ದ್ಯಾವವ್ವದೇವಿಯ ಜಾತ್ರಾ ಮಹೋತ್ಸವ ಹಾಗೂ ದಿ. ೧೯ ರಿಂದ ಪ್ರಾರಂಭಗೊಳ್ಳಲಿರುವ ಶ್ರೀ ಖಾಸ್ಗತೇಶ್ವರ ಜಾತ್ರಾ ಮಹೋತ್ಸವದಲ್ಲಿ ಇದೇ ಪುರಾತನ ಭೀಮನಭಾವಿಯಲ್ಲಿ ಗಂಗಸ್ಥಳ ಹಾಗೂ ವಿವಿಧ ಪೂಜಾ ಕಾರ್ಯಕ್ರಮಗಳು ನೆರವೇರುವದರಿಂದ ಈ ಪುರಾತನ ಭೀಮನಭಾವಿಯನ್ನು ಸ್ವಚ್ಚತೆ ಕೈಗೊಳ್ಳಲಾಗುತ್ತಿದೆ ಎಂದು ಪುರಸಭೆ ಮುಖ್ಯಾಧಿಕಾರಿ ವಸಂತ ಪವಾರ ಅವರು ತಿಳಿಸಿದರು.
ಭಾವಿಯಲ್ಲಿ ಬಿದ್ದ ಕಲ್ಲು, ಮಣ್ಣು, ಚಿಪ್ಪು ಅಲ್ಲದೇ ಬೆಳೆದ ಮುಳ್ಳಿನ ಗಿಡಗಂಟಿಗಳನ್ನು ಕತ್ತರಿಸಲಾಗಿದೆ. ಭಾವಿಯಲ್ಲಿಯ ನೀರಿನ ಸ್ವಚ್ಚತೆಗೆ ಬ್ಲಿಚಿಂಗ್ ಪೌಡರ್ ಬಳಿಸಿ ಭಾವಿಗೆ ಗಂಗಸ್ಥಳಕ್ಕೆ ಆಗಮಿಸುವ ಭಕ್ತರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ಅದರಂತೆ ರಾಜವಾಡೆಯಲ್ಲಿ ಕೆಲವೆಡೆ ನೀರು ನಿಂತುಕೊಳ್ಳುವದನ್ನು ತಡೆಯಲು ಸಿಮೇಂಟ್ ಕಾಂಕ್ರೇಟ್‌ನಿಂದ ನೀರು ಚರಂಡಿಗೆ ಹರಿದು ಹೊಗುವಂತೆ ಅಲ್ಲದೇ ಚರಂಡಿಗಳ ಸ್ವಚ್ಚತೆಗೆ ಆದ್ಯತೆ ನೀಡಲಾಗಿದೆ. ಮೆರವಣಿಗೆಯ ದಾರಿಯುದ್ದಕ್ಕೂ ರಸ್ತೆ ಚರಂಡಿ ದುರಸ್ಥಿಯ ಜೊತೆಗೆ ಹೆಚ್ಚಿನ ರೀತಿಯಲ್ಲಿ ಸ್ವಚ್ಚತೆಗೆ ಸಿಬ್ಬಂದಿಗಳನ್ನು ನಿಯೋಜಿಸುವ ಕುರಿತು ತಯಾರಿ ಮಾಡಿಕೊಳ್ಳಲಾಗಿದೆ. ಈ ಭಾರಿ ಶ್ರೀ ಗ್ರಾಮದೇವತೆ ಹಾಗೂ ಶ್ರೀ ಖಾಸ್ಗತೇಶ್ವರ ಜಾತ್ರೋತ್ಸವ ಒಟ್ಟಿಗೆ ಬಂದಿರುವದರಿಂದ ಸುಮಾರು ೧೫ ದಿನಗಳ ಕಾಲ ಜಾತ್ರಾ ವೈಭವ ಪಟ್ಟಣದಲ್ಲಿ ಇರುವದರಿಂದ ಜಾತ್ರೋತ್ಸವದಲ್ಲಿ ಲಕ್ಷಾಂತರ ಜನರು ಆಗಮಿಸುತ್ತಾರೆ ಹೀಗಾಗಿ ಪಟ್ಟಣದ ಸಂದರ್ಯಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಪುರಸಭೆ ಮುಖ್ಯಾಧಿಕಾರಿ ವಸಂತ ಪವಾರ ಅವರು ತಿಳಿಸಿದರು.
ಈ ಸಮಯದಲ್ಲಿ ಪುರಸಭೆ ಆರೋಗ್ಯ ನಿರಕ್ಷಕರಾದ ಫೀರೋಜ ಮುಲ್ಲಾ, ಶಿವಾನಂದ ಜುಮನಾಳ, ಸಿದ್ದು ಕೊಳ್ಳಿ, ಮೊದಲಾದವರು ಇದ್ದರು.

