ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಜೀವನದ ಮೌಲ್ಯಗಳ ಮೂಲಕ ಆತ್ಮವಿಶ್ವಾಸ ಬೆಳೆಸಿ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಕಾರಣರಾಗುವವರೇ ಶಿಕ್ಷಕರು ಅರ್ಥಾತ ಗುರುಗಳು ಎಂದು ನಿವೃತ್ತ ತಹಶೀಲ್ದಾರ ಆರ್.ಆರ್,ಮಣೂರ ಹೇಳಿದರು.
ಪಟ್ಟಣದ ಗೆಳೆಯರ ಬಳಗದಿಂದ ಶನಿವಾರ ಬಿಎಲ್‌ಡಿಇ ಸಂಸ್ಥೆಯ ದೇವರಹಿಪ್ಪರಗಿ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ೩೯ ವರ್ಷಗಳ ಹಿಂದೆ ನಿವೃತ್ತರಾದ ಬಿ.ಎಸ್.ಪಾಟೀಲ (ಜಾಲವಾದ)ರವರ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಮಾನವನ ಜೀವನದಲ್ಲಿ ಗುರುವಿನ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಈಗಲೂ ತಮ್ಮ ೯೯ ನೇ ವಯಸ್ಸಿನಲ್ಲಿ ಚಟುವಟಿಕೆಯಿಂದ ಇದ್ದು ಎಲ್ಲರಿಗೂ ಮಾರ್ಗದರ್ಶನ ನೀಡುವ ಗುರುಗಳ ಸಾಧನೆ ನಿಜವಾಗಿಯೂ ಇಂದಿನ ಎಲ್ಲರಿಗೂ ಆದರ್ಶಪ್ರಾಯ ಎಂದರು.
ಸನ್ಮಾನಿತ ಬಿ.ಎಸ್.ಪಾಟೀಲ ಶಿಕ್ಷಕರು ಮಾತನಾಡಿ, ತಾವು ಕಲಿಸಿದ ವಿದ್ಯಾರ್ಥಿಗಳು ಇಂದು ತಾವು ಸಹ ನಿವೃತ್ತರಾಗಿ ನಂತರ ನಿವೃತ್ತ ಗುರುವನ್ನು ಸನ್ಮಾನಿಸಿದ್ದು ಇದು ಅತ್ಯಂತ ಸಂತೋಷಕರ ಹಾಗೂ ವಿರಳ ಸಂದರ್ಭ. ಇದು ಎಲ್ಲರಿಗೂ ದೊರೆಯದು. ಎಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು.
ಬಸವಶರಣ ಸಂಗಮ ಸೇವಾ ಸಮಿತಿ ಅಧ್ಯಕ್ಷ ಸಂಗಪ್ಪ ತಡವಲ್, ನಿವೃತ್ತ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಕೆ.ಕುದರಿ, ನಿವೃತ್ತ ಕೃಷಿ ಅಧಿಕಾರಿ ಮಡಿವಾಳಯ್ಯ ಬುದ್ನಿಮಠ, ಕಾಶೀಪತಿ ದೇವಣಗಾಂವ, ಎಸ್.ಕೆ.ಪೋಲೇಶಿ, ಸಂಗಮೇಶ ಪಾಟೀಲ ಇದ್ದರು.

