ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ೨೦೨೬-೨೭ನೇ ಸಾಲಿನಲ್ಲಿ ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಕರ್ನಾಟಕ ಸರ್ಕಾರ ಜಾರಿಗೊಳಿಸಿದೆ. ಆದರೆ, ಈ ಸರ್ಕಾರದ ಆದೇಶ ಹೊರಬರುವ ಮುನ್ನವೇ ಕೆಲವು ವಿದ್ಯಾರ್ಥಿಗಳು ಹಣ ಪಾವತಿಸಿ ಬಸ್ ಪಾಸ್ ಪಡೆದಿದ್ದು, ಅಂತಹ ವಿದ್ಯಾರ್ಥಿಗಳಿಗೆ ಅವರು ಪಾವತಿಸಿದ ಮೊತ್ತವನ್ನು ಮರುಪಾವತಿಸಲು ಇದೀಗ ಕ್ರಮ ಕೈಗೊಳ್ಳಲಾಗಿದೆ.
ಈಗಾಗಲೇ ಬಸ್ ಪಾಸ್‌ಗಾಗಿ ಹಣ ಪಾವತಿಸಿರುವ ಅರ್ಹ ವಿದ್ಯಾರ್ಥಿಗಳು ತಮಗೆ ಸಂಬಂಧಿಸಿದ ಬಸ್ ಪಾಸ್ ಕೌಂಟರ್‌ಗಳಿಗೆ ಖುದ್ದಾಗಿ ಭೇಟಿ ನೀಡುವ ಮೂಲಕ ಅಥವಾ ಆನ್‌ಲೈನ್‌ನಲ್ಲಿ ಲಭ್ಯವಿರುವ ಅಧಿಕೃತ ಲಿಂಕ್ ಬಳಸಿ ಅರ್ಜಿ ಸಲ್ಲಿಸಿ ತಮ್ಮ ಹೆಸರನ್ನು ಮರುಪಾವತಿಗಾಗಿ ನೋಂದಾಯಿಸಿಕೊಳ್ಳಬಹುದಾಗಿದೆ. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ಅತ್ಯಂತ ಜಾಗರೂಕತೆಯಿಂದ ಮತ್ತು ಸರಿಯಾಗಿ ನಮೂದಿಸಬೇಕಾಗುತ್ತದೆ. ಸಲ್ಲಿಕೆಯಾದ ಅರ್ಜಿಗಳ ಸೂಕ್ತ ಪರಿಶೀಲನೆಯ ನಂತರ, ವಿದ್ಯಾರ್ಥಿಗಳು ಪಾವತಿಸಿದ್ದ ಬಸ್ ಪಾಸ್ ಮೊತ್ತವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ (ಡಿಬಿಟಿ) ಮಾಡಲಾಗುತ್ತದೆ. ಈ ಯೋಜನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು ತಮ್ಮ ಸಮೀಪದ ಬಸ್ ಪಾಸ್ ಕೌಂಟರ್ ಅನ್ನು ಸಂಪರ್ಕಿಸಬಹುದು ಅಥವಾ ಸಾರಿಗೆ ನಿಗಮದ ಅಧಿಕೃತ ಸೂಚನೆಗಳನ್ನು ಪಾಲಿಸಬಹುದು ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
