ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ಬರದ ಬಿಸಿಲು ನಾಡಿಗೆ ಒಕ್ಕರಿಸಿದ ಅಕಾಲಿಕ ಮಳೆ, ಗಾಳಿ, ಸಿಡಿಲಿನ ಹೊಡೆತಕ್ಕೆ ಸಾವು ನೋವುಗಳು ಮತ್ತು ಅಪಾರ ನಷ್ಟಗಳು ಸಂಭವಿಸಿದ್ದು, ಗಿಡ ಮರಗಳು ನೆಲಕ್ಕುರುಳಿದ ಪರಿಣಾಮ ಜನ ಜಾನುವಾರಳಿಗೆ ತೊಂದರೆಯುಂಟಾಗಿ ಜನಜೀವನ ಅಸ್ತವ್ಯಸ್ತವಾದ ಘಟನೆ ಕಲಕೇರಿ ಸಮೀಪದ ಹುಣಶ್ಯಾಳ, ಆಲಗೂರ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಿ.೨೪ ರ ಸಾಯಂಕಾಲ ಜೋರಾದ ಬಿರುಗಾಳಿ ಸಮೇತ ಸುರಿದ ಮಳೆಗೆ ಸಾಕಷ್ಟು ಗಿಡಮರಗಳು ನೆಲಕ್ಕುರುಳಿದ್ದು, ಜೀವಹಾನಿಯೂ ಸಂಭವಿಸಿದ ಘಟನೆಗಳು ನಡೆದಿವೆ.
ಸಾಯಂಕಾಲ ಒಮ್ಮಿಂದೊಮ್ಮೆಲೆ ಬಿರುಗಾಳಿ ಸಮೇತ ಗುಡುಗು, ಮಿಂಚಿನೊಡನೆ ಪ್ರಾರಂಭವಾದ ಮಳೆಯಿಂದ ಸಾಕಷ್ಟು ಅವಘಡಗಳು ಸಂಭವಿಸಿದ್ದು, ಕಲಕೇರಿ ಸಮೀಪದ ಆಲಗೂರ ಗ್ರಾಮದಲ್ಲಿ ಇದೇ ವೇಳೆ ಕುರಿ ಕಾಯಲು ಹೋಗಿದ್ದ ಸುಮಾರು ೧೮ ವರ್ಷದ ಆಕಾಶ ಹೈಯಾಳದಪ್ಪ ಯಂಕಂಚಿ ಎಂಬ ಯುವಕ ಸಿಡಿಲಿಗೆ ಬಲಿಯಾದ ಘಟನೆ ನಡೆದಿದೆ. ಈ ಕುರಿತು ಕಲಕೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದೇ ವೇಳೆ ಪಕ್ಕದ ಗ್ರಾಮವಾದ ಹುಣಶ್ಯಾಳದಲ್ಲಿ ಮಳೆ ಮತ್ತು ಸಿಡಿಲಿನ ಅವಘಡಕ್ಕೆ ಪ್ರಭುಗೌಡ ನಂದಪ್ಪ ದೇವರಗುಡಿ ಅವರ ಹೊಲದಲ್ಲಿ ಕಟ್ಟಲಾಗಿದ್ದ ಸುಮಾರು ಒಂದು ಲಕ್ಷ ಬೆಲೆಬಾಳುವ ಎತ್ತು ಸಾವನ್ನಪ್ಪಿದ ಘಟನೆ ಸಂಭವಿಸಿದ್ದು, ಕೃಷಿ ಚಟುವಟಿಕೆಯಲ್ಲಿ ಆಸರೆಯಾಗಿದ್ದ ಎತ್ತನ್ನು ಕಳೆದುಕೊಂಡ ರೈತ ಕಂಗಾಲಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಸಾಯಂಕಾಲ ಜೋರಾಗಿ ಬೀಸಿದ ಗಾಳಿ ಮಳೆ ಹೊಡೆತಕ್ಕೆ ಹಲವಾರು ಗಿಡಮರಗಳು ಬುಡಸಮೇತ ಕಿತ್ತು ಬಿದ್ದಿದ್ದು, ವಿವಿಧ ಗ್ರಾಮಗಳಿಗೆ ತೆರಳುವ ರಸ್ತೆಗಳ ಮೇಲೆಯೂ ಗಿಡಗಳು ರೆಂಬೆ ಕೊಂಬೆಗಳು ಉರುಳಿ ಬಿದ್ದಿದ್ದರಿಂದ ಸಂಚಾರ ಮತ್ತು ಜನಜೀವನ ಅಸ್ತವ್ಯಸ್ಥವಾಗಿದೆ.

