ಡಾ.ರಾಜ್‌ಕುಮಾರ ೯೭ನೇ ಜನ್ಮದಿನ ಆಚರಣೆಯಲ್ಲಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಮ್ಮ ನಾಡಿನ ಸಂಸ್ಕೃತಿ, ಭವ್ಯ ಪರಂಪರೆ ಹಾಗೂ ಮಾನವೀಯ ಮೌಲ್ಯಗಳನ್ನು ಸಾರುವ ಸಾಮಾಜಿಕ ಚಲನಚಿತ್ರಗಳಲ್ಲಿ ನಟಿಸುವ ಮೂಲಕ ತಮ್ಮ ಅಭಿನಯ ಮತ್ತು ವ್ಯಕ್ತಿತ್ವದಿಂದ ನಾಡಿನ ಜನರ ಮನಗಳಲ್ಲಿ ಮನೆ ಮಾಡಿದ ಡಾ.ರಾಜ್‌ಕುಮಾರ್ ಅವರು ಕರ್ನಾಟಕ ಕಂಡ ಮೇರು ವ್ಯಕ್ತಿತ್ವದ ಮಹಾನ್ ನಟರಾಗಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಹಯೋಗದಲ್ಲಿ ಗುರುವಾರ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಆಯೋಜಿಸಿದ್ದ ಡಾ.ರಾಜ್‌ಮಾರ ಅವರ ೯೭ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಡಾ.ರಾಜ್‌ಕುಮಾರ ಅವರು ಓರ್ವ ಗಾಯಕರಾಗಿ, ನಟರಾಗಿ ಕನ್ನಡ ನಾಡು-ನುಡಿ ಚಳುವಳಿಯಲ್ಲಿ ಸಕ್ರೀಯವಾಗಿ ಭಾಗವಹಿಸಿ, ಕನ್ನಡಕ್ಕಾಗಿ ಕೊಡುಗೆ ನೀಡಿದ್ದಾರೆ. ಅವರ ಸರಳತೆ ಅಭಿನಯದ ಮೂಲಕ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಸಮಾಜದ ಎಲ್ಲರ ಮನ ಗೆದ್ದಿರುವ ರಾಜ್‌ಕುಮಾರ ಅವರ ಜನ್ಮ ದಿನಾಚರಣೆ ಕಾರ್ಯಕ್ರಮ ಸರ್ಕಾರದ ವತಿಯಿಂದ ಆಚರಿಸಲಾಗುತ್ತಿದ್ದು, ಕನ್ನಡಿಗರಿಗೆ ಹೆಮ್ಮೆಯ ಕ್ಷಣವಾಗಿದೆ ಎಂದು ಅವರು ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ಕ್ರೀಡಾಧಿಕಾರಿ ರಾಜಶೇಖರ ಧೈವಾಡಿ ಅವರು ಮಾತನಾಡಿ, ಈ ನಾಡಿಗೆ ಮಾದರಿಯಾದ ಡಾ.ರಾಜ್‌ಕುಮಾರ್ ಅವರ ಬದುಕು ನಮಗೆ ಪ್ರೇರಕ ಶಕ್ತಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಅಮರೇಶ ದೊಡಮನಿ ಅವರು ಸ್ವಾಗತಿಸಿ, ಮಾತನಾಡಿದರು.
ಜಿಲ್ಲಾ ಪಂಚಾಯತಿಯ ಸಹಾಯಕ ಕಾರ್ಯದರ್ಶಿಗಳಾದ ಶ್ರೀಮತಿ ಅನುಸೂಯಾ ಚಲವಾದಿ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಕೆಎಂಎಫ್‌ನ ಅರವಿಂದ ಕನ್ನೂರ, ತೋಟಗಾರಿಕೆ ಇಲಾಖೆ ಅಧಿಕಾರಿ ಭಗವಂತ ಜಿಗಜಿಣಗಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷರಾದ ಹಾಸಿಂಪೀರ ವಾಲಿಕಾರ, ಶರಣು ಸಬರದ, ವಿದ್ಯಾವತಿ ಅಂಕಲಗಿ, ಭೀಮರಾಯ ಜಿಗಜಿಣಗಿ, ದೇವೇಂದ್ರ ಮಿರೇಕರ, ಸೋಮನಗೌಡ ಕಲ್ಲೂರ ಸೇರಿದಂತೆ ವಿವಿಧ ಸಮಾಜದ ಮುಖಂಡರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ಗಮನ ಸೆಳೆದ ಪ್ರವಾಸೋದ್ಯಮ ಉಪನಿರ್ದೇಶಕ
ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ ಹಾಡಿನ ಮೂಲಕ ವಿಶೇಷ ಗಮನ ಸೆಳೆದರು.
ರಂಜಿಸಿದ ರಾಜ್‌ಕುಮಾರ ಗೀತೆಗಳು
ಕಾರ್ಯಕ್ರಮದಲ್ಲಿ ಆಯೋಜಿಸಲಾದ ಡಾ.ರಾಜ್‌ಕುಮಾರ ಅವರ ಅಭಿಯನದ ಚಲನಚಿತ್ರಗಳ ಗೀತ ಗಾಯನವು ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿತು. ಗಾಯಕರಾದ ವಿರೇಶ ವಾಲಿ, ಈಶ್ವರ ಉಮರಾಣಿ, ಸಾಗರ ಬಾಗಲಕೋಟೆ, ಕಿರಣ ಪೂಜಾರಿ ಸುಮಧುರ ಹಾಡುಗಳ ಮೂಲಕ ರಂಜಿಸಿದರು.

