ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಜಮ್ಮು-ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ನ ಬೈಸರನ್ ಕಣಿವೆ ಪ್ರದೇಶದಲ್ಲಿ ಉಗ್ರರು ನಡೆಸಿದ ನರಮೇಧವನ್ನು ಖಂಡಿಸಿ ಆಲಮೇಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕ್ಯಾಂಡಲ್ ಮಾರ್ಚ್ ಮೂಲಕ ಶ್ರದ್ಧಾಂಜಲಿ ಸಭೆ ನಡೆಸಲಾಯಿತು.
ಈ ವೇಳೆ ಕಾಂಗ್ರೆಸ್ ಮುಖಂಡ ರಮೇಶ ಭಂಟನೂರ ಮಾತನಾಡಿ ಭಾರತವು ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ಭೂಲೋಕದ ಸ್ವರ್ಗ ಕಾಶ್ಮೀರ ಕಣಿವೆ ಭಾಗದಲ್ಲಿ ಪದೇ ಪದೇ ಭಯೋತ್ಪಾದಕ ಕೃತ್ಯಗಳು ನಡೆಯುತ್ತಿವೆ. ಇದು ಮತೀಯ ಸಾಮರಸ್ಯ ಕದಡುವ ಹೀನಕೃತ್ಯವಾಗಿದ್ದು , ಸರ್ಕಾರ ಬೇಗನೆ ಉಗ್ರಗಾಮಿಗಳನ್ನು ಬಂಧಿಸಿ ಗಲ್ಲು ಶಿಕ್ಷೆ ವಿಧಿಸಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಾದೀಕ ಸುಂಬಡ ಮಾತನಾಡಿ, 26 ಜನ ಅಮಾಯಕ ಪ್ರವಾಸಿಗರ ಭೀಕರ ಹತ್ಯೆಯ ನೈತಿಕ ಹೊಣೆಹೊತ್ತು ಕೇಂದ್ರ ಗೃಹ ಸಚಿವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಭದ್ರತಾ ವೈಫಲ್ಯವೇ ಈ ಘಟನೆಗೆ ಕಾರಣವಾಗಿದ್ದು, ಭಯೋತ್ಪಾದಕರಿಗೆ ಯಾವುದೇ ಧರ್ಮವಿಲ್ಲ. ಭಯೋತ್ಪಾದನೆಯೇ ಒಂದು ಧರ್ಮವಾಗಿದ್ದು ಇಡೀ ಜಗತ್ತಿಗೆ ಅಂಟಿದ ಪಿಡುಗಾಗಿದೆ ಎಂದು ಬ್ಲಾಕ್ ಡಾಕ್ಟರ್ಸ್ ಸೆಲ್ ಅಧ್ಯಕ್ಷ ಡಾ.ಸಮೀರ ಹಾದಿಮನಿ ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಕಾರ್ಯಲಯದಿಂದ ಅಂಬೇಡ್ಕರ್ ವೃತ್ತದ ವರೆಗೆ ಕಪ್ಪುಬಟ್ಟೆ ತೋಳಿಗೆ ಕಟ್ಟಿಕೊಂಡು ಮೇಣದ ಬತ್ತಿಯೊಂದಿಗೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸಾರ್ವಜನಿಕರು ಸಾಗಿ ಶ್ರದ್ಧಾಂಜಲಿ ಸಲ್ಲಿಸಿದರು.
ಮುಖಂಡರಾದ ಬಸವರಾಜ ತೆಲ್ಲೂರ, ಮಲ್ಲು ಅಚಲೇರಿ, ಚಂದು ಹಳೇಮನಿ, ಸಂತೋಷ ಜರಕರ್, ಬಾಬು ಕೊತಿಂಬಿರ, ಸೈಫನ್ ಜಮಾದಾರ, ಮುನ್ನಾ ಚೌಧರಿ, ಭಾಗ್ಯವಂತ ಆಲಮೇಲಕರ, ಶಶಿ ಗಣಿಯಾರ, ಪುಂಡು ದೊಡಮನಿ, ಸಂತೋಷ ಮೇಲಿನಮನಿ, ಯಲ್ಲಪ್ಪ ಬುರುಡ, ಸಚೀನ ಕ್ಷೀರಸಾಗರ, ಮಹಾದೇವಿ ಬಂಡಿವಡ್ಡರ, ಶೈಲಾ ಹೊಸಮನಿ ಮುಂತಾದವರು ಭಾಗವಹಿಸಿದ್ದರು.

