ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪುಸ್ತಕಗಳು ಸಂಸ್ಕೃತಿಯ ಜೀವಂತ ವಾಹಕ. ಅವು ಮನುಕುಲದ ಬೆಳವಣಿಗೆಗೆ ಸಹಕಾರಿಯಾಗಿವೆ. ಅವು ಮಾನವನಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವ ಜತೆಗೆ
ವ್ಯಕ್ತಿಯ ಆರೋಗ್ಯಕರ ವಿಕಸನಕ್ಕೆ ದಾರಿದೀಪವಾಗಿವೆ ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.
ಬುಧವಾರದಂದು ತಾಲೂಕಿನ ನಾಗಠಾಣ ಗ್ರಾಮದ ಶ್ರೀ ಮಲ್ಲಿಕಾರ್ಜುನ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ‘ವಿಶ್ವ ಪುಸ್ತಕ ದಿನ’ ದ ನಿಮಿತ್ತ ಹಮ್ಮಿಕೊಂಡ ‘ಪುಸ್ತಕ ಬಾಳಿನ ಬೆಳಕು’-ಚಿಂತನ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.
ಪುಸ್ತಕಗಳು ವಿದ್ಯಾವಂತ ಸಮಾಜದ ಅವಿಭಾಜ್ಯ ಅಂಗವಾಗಿದ್ದು, ಪುಸ್ತಕಗಳ ಓದಿನಿಂದ ಜೀವನೋತ್ಸಾಹ, ಕ್ರಿಯಾಶೀಲತೆ, ಅಂತಸ್ಸತ್ವಗಳು ಹೆಚ್ಚುತ್ತವೆ. ಇಂದಿನ ಮಕ್ಕಳಲ್ಲಿ ನಾವು ಪುಸ್ತಕ ಓದುವ ಸಂಸ್ಕೃತಿಯ ಬೆಳವಣಿಗೆಗೆ ಅಗತ್ಯ ಪರಿಸರವನ್ನು ರೂಪಿಸಬೇಕು ಎಂದು ಹೇಳಿದರು.
ಶಿಕ್ಷಕ ಸಚೀನ ಅವಟಿ ಮಾತನಾಡಿ, ಪುಸ್ತಕ ಓದುವುದರಿಂದ ನಮ್ಮ ಮಾನಸಿಕ ಶಕ್ತಿ ಮತ್ತು ಜ್ಞಾನ ಸುಧಾರಿಸುತ್ತದೆ. ಪುಸ್ತಕ ಓದಿನಿಂದ ಶಬ್ದಕೋಶ, ಏಕಾಗ್ರತೆ ಮತ್ತು ಆಲೋಚನಾ ಕೌಶಲ್ಯ ವೃದ್ಧಿಯಾಗಿ ಮಕ್ಕಳ
ಆತ್ಮವಿಶ್ವಾಸ ಸುಧಾರಿಸುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಶಂಕರ ಹುಣಶ್ಯಾಳ ಮಾತನಾಡಿ, ‘ಪುಸ್ತಕ’ ಎಂದರೆ ಜ್ಞಾನ ಭಂಡಾರ. ಅದು ಅನೇಕ ತಲೆಮಾರುಗಳ ಆಸ್ತಿ, ಎಂದೂ ಕರಗದ ಸಂಪತ್ತು. ಪುಸ್ತಕ ಓದಿನಿಂದ ಮಕ್ಕಳಲ್ಲಿ ಭಾಷಾ ಜ್ಞಾನ, ಪದಗಳ ಪರಿಚಯ, ಸಾಹಿತ್ಯದಲ್ಲಿ ಆಸಕ್ತಿ ಬೆಳೆಯುತ್ತದೆ. ಭವಿಷ್ಯದ ಬಲಿಷ್ಠ ನ್ಯಾಯಯುತ ಸಮಾಜ ನಿರ್ಮಾಣಕ್ಕಾಗಿ ಪುಸ್ತಕ ಓದು ಬಹು ಅಗತ್ಯ ಎಂದು ಹೇಳಿದರು.
ಶಿಕ್ಷಕರಾದ ಸುನಂದಾ ಹುಣಶ್ಯಾಳ, ಜಯಶ್ರೀ ಬಂಗಾರಿ, ನವೀನ ಬಂಡೆನ್ನವರ, ರೇಣುಕಾ ಭಜಂತ್ರಿ, ಸುನೀಲ ಜಾಧವ, ಗೀತಾ ನಿಕ್ಕಂ, ವೀರೇಶ ಹುಣಶ್ಯಾಳ ಸೇರಿದಂತೆ ಮಕ್ಕಳು ಉಪಸ್ಥಿತರಿದ್ದರು.

